
ಕಲಬುರಗಿ,ಏ.3: ನಗರದ ಹಳೆಯ ಜೇವರಗಿ ರಸ್ತೆಯ ಪಿ ಅಂಡ್ ಟಿ ಕಾಲೋನಿಯಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಅನೀಲ ವಿಠ್ಠಲ ರಾಠೋಡ ( 45) ಕೊಲೆಯಾದ ವ್ಯಕ್ತಿ.ಹಣಕಾಸಿನ ವಿಷಯದಲ್ಲಿ ಉಂಟಾದ ವೈಮನಸ್ಸು ಕೊಲೆಯ ಕಾರಣವಿರಬಹುದೆಂದು ಶಂಕಿಸಲಾಗಿದೆ.
ಹಳೆಯ ಜೇವರಗಿ ರಸ್ತೆಯ ಕರ್ನಾಟಕ ಬ್ಯಾಂಕ್ ಬಳಿ ಕಚೇರಿ ಹೊಂದಿದ್ದ ಅನೀಲ ವಿಠ್ಠಲ ರಾಠೋಡ ಅವರು ರಿಯಲ್ ಎಸ್ಟೇಟ್ ಮತ್ತು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು. ಇವರು ಮಾಜಿ ಸಚಿವ ರೇವೂನಾಯಕ ಬೆಳಮಗಿ ಅವರ ಅಳಿಯ ಎಂದು ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ 8.30 ರ ಸುಮಾರಿಗೆ ಆಟೋದಲ್ಲಿ ಬಂದ ಅಪರಿಚಿತರು ಮಾರಕಾಸ್ತ್ರಗಳಿಂದ ಡಿಢೀರ್ ದಾಳಿ ಮಾಡಿ ಕೊಲೆ ನಡೆಸಿ ಪರಾರಿಯಾಗಿದ್ದಾರೆ.ಕುಟುಂಬದವರು ನೀಡಿದ ದೂರಿನ ಮೇರೆಗೆ ಈಶ್ವರ ರಾಠೋಡ,ನಾರಾಯಣ ಪವಾರ,ವಿದ್ಯಾಸಾಗರ ಮತ್ತು ಶರಣು ಎಂಬ ನಾಲ್ವರ ವಿರುದ್ಧ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿದ್ದು ಶೋಧ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್ ಡಿ ಅವರು ತಿಳಿಸಿದ್ದಾರೆ.




















