
ಕಲಬುರಗಿ,ಏ.5-ನಗರದ ಪಿ ಆ್ಯಂಡ್ ಟಿ ಕಾಲೋನಿಯಲ್ಲಿ ಏ.2 ರಂದು ರಾತ್ರಿ ನಡೆದ ಫೈನಾನ್ಸಿಯರ್ ಅನಿಲ್ ರಾಠೋಡ್ ಕೊಲೆ ಪ್ರಕರಣದ ಆರೋಪಿ ಈಶ್ವರ ರಾಠೋಡ್ ಎಂಬಾತನ ಮೇಲೆ ಸ್ಟೇಷನ್ ಬಜಾರ್ ಪೊಲೀಸರು ಶೂಟೌಟ್ ಮಾಡಿ ಬಂಧಿಸಿದ್ದಾರೆ.
ಹಣಕಾಸು ವಿಷಯಕ್ಕೆ ಫೈನಾನ್ಸಿಯರ್ ಅನಿಲ್ ರಾಠೋಡ್ ಎಂಬುವವರನ್ನು ಏ.2 ರಂದು ರಾತ್ರಿ ದುಷ್ಕರ್ಮಿಗಳು ಪಿ ಆ್ಯಂಡ್ ಟಿ ಕಾಲೋನಿಯಲ್ಲಿರುವ ಫೈನಾನ್ಸ್ನಲ್ಲಿಯೇ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.
ಕೊಲೆ ನಡೆದ ಎರಡು ದಿನಗಳಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲು ಮುಂದಾದಾಗ ಆರೋಪಿ ಈಶ್ವರ ರಾಠೋಡ್ ಪೆÇಲೀಸರ ಮೇಲೆ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಗುಂಡೇಟಿನಿಂದ ಗಾಯಗೊಂಡಿರುವ ಈಶ್ವರ ರಾಠೋಡನನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಅವರು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ನಾಲ್ವರ ಬಂಧನ
ನಗರದ ಹಳೆಯ ಜೇವರಗಿ ರಸ್ತೆಯ ಪಿ ಆ್ಯಂಡ್ ಟಿ ಕಾಲೋನಿಯಲ್ಲಿ ಗುರುವಾರ ರಾತ್ರಿ ನಡೆದ ಅನೀಲ ವಿಠ್ಠಲ ರಾಠೋಡ ( 45) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸ್ಟೇಷನ್ ಬಜಾರ್ ಪೊಲೀಸರು ಬಂಧಿಸಿದ್ದಾರೆ.
ಈಶ್ವರ ರಾಠೋಡ, ನಾರಾಯಣ ಪವಾರ, ವಿದ್ಯಾಸಾಗರ ಮತ್ತು ಶರಣು ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಶ್ವರ ರಾಠೋಡ್ನನ್ನು ನಿನ್ನೆ ಶೂಟೌಟ್ ಮಾಡಿ ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳನ್ನು ಈ ಮೊದಲೇ ಬಂಧಿಸಲಾಗಿದೆ.




















