ಹಣಕಾಸಿನ ವ್ಯವಹಾರ: ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿ ಕೊಲೆ

ಕಲಬುರಗಿ,ಸೆ.7-ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದಿದೆ ಎಂದು ಕರೆಯಿಸಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇಲ್ಲಿನ ಮಿಲ್ಲತ್ ನಗರದ ಟಿಪ್ಪು ಕಾಲೇಜ್ ಹಿಂದುಗಡೆ ಇರುವ ಮೈದಾನದಲ್ಲಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ.
ನಗರದ ಗುಬ್ಬಿ ಕಾಲೋನಿಯ ಮಕ್ಕಾ ಮಜೀದ್ ಏರಿಯಾ ನಿವಾಸಿ ಸುರೇಶ್ ರೆಡ್ಡಿ ಅಲಿಯಾಸ್ ಬಟ್ ಸುರೇಶ್ ಅಲಿಯಾಸ್ ಬಿಲಾಲ್ ಅಹೆಮದ್ (50) ಕೊಲೆಯಾದವರು.
ಕೊಲೆಗೆ ಹಣಕಾಸಿನ ವ್ಯವಹಾರವೇ ಕಾರಣವೆನ್ನಲಾಗಿದ್ದು, ಈ ಸಂಬಂಧ ಟಮೆಟೊ ಸಮೀರ್, ಟಿಪ್ಪು, ಎ.ಸಿ.ಸೋಯಲ್ ಮತ್ತು ಬಿಸ್ಲೇರಿ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದೆ. ಟಮೆಟೊ ಸಮೀರ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಸುದ್ದಿ ತಿಳಿದು ಶ್ವಾನದಳ ಮತ್ತು ಬೆರಳಚ್ಚು ತಜ್ಞರು, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಸಬ್-ಅರ್ಬನ್ ಎಸಿಪಿ ಡಿ.ಸಿ.ರಾಜಣ್ಣ, ಪಿಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.