ಫೆ.೬-೭ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ

ಕೋಲಾರ,ಜ,೧೩-ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟವನು ಇದೇ ಫೆಬ್ರವರಿ ೬ ಮತ್ತು ೭ ರಂದು ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳ ಹೇಳಿದರು.


ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨೫-೨೬ನೇ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಸಂಘಟಿಸುವ ಸಂಬಂಧ ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ, ಕುಸ್ತಿ, ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಖೋಖೋ, ಬಾಲ್ ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್, ಟೆನಿಕಾಯ್ಟ್, ವೇಟ್ ಲಿಫ್ಟಿಂಗ್, ದೇಹದಾಡ್ಯ, ಪವರ್ ಲಿಫ್ಟಿಂಗ್, ಚೆಸ್, ಥ್ರೋ ಬಾಲ್, ಈಜು, ಕೇರಂ, ಯೋಗ, ಟೆನ್ನಿಸ್ ಕ್ರೀಡೆಗಳು ನಡೆಯಲಿದೆ. ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಪುಟ್ಬಾಲ್, ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ನಗರದ ಇ ಜೋನ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.


ಸಾಂಸ್ಕೃತಿಕ ಸ್ಪರ್ಧೆಗಳಾದ ಹಿಂದೂಸ್ತಾನಿ ಸಂಗೀತ (ಮೌಖಿಕ ಮತ್ತು ಕ್ಲಾಸಿಕಲ್), ಲಘು ಶಾಸ್ತ್ರೀಯ ಸಂಗೀತ (ಮೌಖಿಕ ಮತ್ತು ಕ್ಲಾಸಿಕಲ್), ಕರ್ನಾಟಕ ಸಂಗೀತ- ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ (ವೈಯಕ್ತಿಕ ಮತ್ತು ತಂಡ), ನೃತ್ಯ (ಕಥಕ್, ಮಣಿಪರಿ, ಕುಚಿಪುಡಿ, ಒಡಿಸ್ಸಿ, ಭರತನಾಟ್ಯ, ಜಾನಪದ ನೃತ್ಯ (ತಂಡ), ವಾದ್ಯ ಸಂಗೀತ:-ಸ್ಟಿಂಗ್ ವಾದ್ಯಗಳು, ಹಿಂದೂಸ್ಥಾನಿ (ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ), ವಿಂಡ್ ವಾದ್ಯಗಳು (ಕರ್ನಾಟಕ-ಶಾಸ್ತ್ರೀಯ ಹಾಗೂ ಲಘು ಶಾಸ್ತ್ರೀಯ), ಪರಿಕೇಷನ್ ವಾದ್ಯಗಳು (ಜನರಲ್), ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಕಿರು ನಾಟಕಗಳ ಸ್ಪರ್ಧೆಗಳು ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆಯಲಿವೆ ಎಂದು ತಿಳಿಸಿದರು.


ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆಯಿಂದ ಅಲಂಕಾರಿಕ ಹೂವಿನ ಗಿಡಗಳನ್ನು ನೀಡಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ ಅಗತ್ಯ ಔಷಧಿಯೊಂದಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.


ನಗರಸಭೆ ವತಿಯಿಂದ ಕುಡಿಯುವ ನೀರು ವ್ಯವಸ್ಥೆ ಮಾಡಬೇಕು. ಶಿಷಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಿ ಎಂದರು.


ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಗೌರವ ಅಧ್ಯಕ್ಷ ಕೆ.ಎನ್. ಮಂಜುನಾಥ್, ಖಜಾಂಚಿ ಮುರಳಿ ಮೋಹನ್, ಕಾರ್ಯದರ್ಶಿ ಸತೀಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಪರ್ವೀನ್ ತಾಜ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸನ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮೈಲಾರಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಲತಾ, ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.