
ಮುಂಬೈ, ಫೆ.೨೩: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ರಾಣಿಗಾಂವ್ ಘಾಟ್ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶಿವಾಝಿರಿಯಿಂದ ಎರಡು ಕಿ.ಮೀ ಮುಂಚಿತವಾಗಿ ಧರಣಿ ತಾಲ್ಲೂಕಿನ ರಾಣಿಗಾಂವ್ ಘಾಟ್ ವಿಭಾಗದಲ್ಲಿ ಈ ಅಪಘಾತ ಸಂಭವಿಸಿದೆ. ಪಿಕಪ್ ವ್ಯಾನ್ ನಿಯಂತ್ರಣ ತಪ್ಪಿ ಕಿರಿದಾದ ಬೆಟ್ಟದ ರಸ್ತೆಯಿಂದ ಆಳವಾದ ಕಮರಿಗೆ ಬೀಳುವ ಮೊದಲು ತಿರುಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೀಕರ ಅಪಘಾತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿರಿದಾದ ಘಾಟ್ ರಸ್ತೆ ಮತ್ತು ಕಣಿವೆಯ ಆಳದಿಂದಾಗಿ ರಕ್ಷಣಾ ಕಾರ್ಯಾಚರಣೆಯು ದೊಡ್ಡ ಸವಾಲೊಡ್ಡಿತು.
ಪೊಲೀಸ್, ಸ್ಥಳೀಯ ಆಡಳಿತ ಅಧಿಕಾರಿಗಳು ಮತ್ತು ನಿವಾಸಿಗಳು ಸ್ಥಳಕ್ಕೆ ಧಾವಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದರು. ಗಾಯಾಳುಗಳನ್ನು ಕಮರಿಯಿಂದ ರಕ್ಷಿಸಿ ಧರಣಿ ಉಪ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದ ಕಾರಣ, ವಾಹನದಲ್ಲಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಮತ್ತು ಮೃತರು ಮತ್ತು ಗಾಯಗೊಂಡವರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.



























