
ಬೆಂಗಳೂರು,ಫೆ.೧೬- ಧಾರವಾಡ,ಕೊಡಗು, ದಾವಣಗೆರೆ,ಹಾಸನ,ಉತ್ತರ ಕನ್ನಡ, ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ನ್ಯಾಯಾಲಯಗಳಿಗೆ ಬಂದ ಬಾಂಬ್ ಬೆದರಿಕೆ ಸಂದೇಶವು ತಪಾಸಣೆಯಲ್ಲಿ ಹುಸಿಯಾಗಿದ್ದು,ನಿಟ್ಟುಸಿರು ಬಿಡುವಂತಾಗಿದೆ.
ಧಾರವಾಡ ಹೈಕೋರ್ಟ್ ಪೀಠ,ದಾವಣಗೆರೆ, ಮಡಿಕೇರಿ,ಹಾಸನ, ಉತ್ತರ ಕನ್ನಡ ಸೇರಿ ಕೆಲ ಜಿಲ್ಲಾ ನ್ಯಾಯಾಲಯಗಳಿಗೆ ಇಂದು ಬೆಳಿಗ್ಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಕಳುಹಿಸಿದ್ದು,ಕೆಲ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು.
ಇ-ಮೇಲ್ ಮೂಲಕ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶವನ್ನು ದುಷ್ಕರ್ಮಿಗಳು ಕಳುಹಿಸುವುದು ಪತ್ತೆಯಾದ ತಕ್ಷಣವೇ ನ್ಯಾಯಾಲಯಗಳಿಂದ ವಕೀಲರು ಸಿಬ್ಬಂದಿ ಕಕ್ಷಿದಾರರು ಸೇರಿ ಎಲ್ಲರೂ ಹೊರಬಂದಿದ್ದಾರೆ.
ಶ್ವಾನದಳ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪೊಲೀಸರು ತಪಾಸಣೆ ನಡೆಸಿದಾಗ ಹುಸಿ ಎನ್ನುವುದು ಕಂಡುಬಂದಿದ್ದು,ತಪಾಸಣೆ ಬಳಿಕ ಮತ್ತೆ ನ್ಯಾಯಾಲಯದ ಕಾರ್ಯ ಕಲಾಪಗಳು ಎಂದಿನಂತೆ ಅರಂಭಗೊಂಡಿವೆ.
ಹೈಕೋರ್ಟ್ ಪೀಠಕ್ಕೆ ಬೆದರಿಕೆ:
ಧಾರವಾಡ ಹೈಕೋರ್ಟ್ ಪೀಠ ಹಾಗೂ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ.ಕೂಡಲೇ ಕೋರ್ಟ್ ಸಿಬ್ಬಂದಿ ಹಾಗೂ ವಕೀಲಯರನ್ನ ಹೊರಗೆ ಕಳುಹಿಸಿದ್ದು, ಬಳಿಕ ಧಾರವಾಡ ಗರಗ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಕೋರ್ಟ್ ಆವರಣಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಎಸ್ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಶೋಧ ನಡೆಸಿದಾಗ ಹುಸಿ ಸಂದೇಶ ಎನ್ನುವುದು ಪತ್ತೆಯಾಗಿದೆ.
ಒಂದು ತಿಂಗಳ ಹಿಂದೆ ಇದೇ ರೀತಿ ಸ್ಪೋಟಿಸುವುದಾಗಿ ಈ ಮೇಲ್ ಸಂದೇಶ ಬಂದಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಜಿಲ್ಲಾ ಕೋರ್ಟ್‌ಗೆ ಬೆದರಿಕೆ. ದಾವಣಗೆರೆ ಜಿಲ್ಲಾ ನ್ಯಾಯಾಲಯಕ್ಕೂ ಅಪರಿಚಿತ ಇ-ಮೇಲ್ ವಿಳಾಸದಿಂದ ಬಾಂಬ್ ಬೆದರಿಕೆ ಬಂದಿದೆ. ಇಂದು ಮಧ್ಯಾಹ್ನ ೧೨:೩೦ರ ಹೊತ್ತಿಗೆ ಆರ್‌ಡಿಎಕ್ಸ್ ಸ್ಫೋಟವಾಗಲಿದೆ ಎಂಬ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕಲಾಪಗಳನ್ನು ಸ್ಥಗಿತಗೊಳಿಸಲಾಗಿದೆ.
ಮಾಹಿತಿ ಪಡೆದ ಪೊಲೀಸರು ಕೂಡಲೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಇ-ಮೇಲ್ ವಿಳಾಸ ತಮಿಳುನಾಡಿನಲ್ಲಿ ಪತ್ತೆಯಾಗಿದೆ.ಕೆಲಕಾಲ ಕೋರ್ಟ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹಾಸನ ಕೋರ್ಟ್ ಗೆ ಬೆದರಿಕೆ:
ಹಾಸನದ ಜಿಲ್ಲಾ ನಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಹಾಸನ ನಗರ ಠಾಣೆ ಪೊಲೀಸರು ತಪಾಸಣೆ ಕೈಗೊಂಡಿದ್ದಾರೆ. ಕೋರ್ಟ್ ಸಿಬ್ಬಂದಿ, ವಕೀಲರನ್ನ ಆವರಣದಿಂದ ಹೊರಗೆ ಕಳಿಸಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಪಾರ್ಕಿಂಗ್, ಕೋರ್ಟ್ ಆವರಣ, ಒಳಾಂಗಣಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಪಾಸಣೆ ನಡೆಸುತ್ತಿವೆ.
ಮಡಿಕೇರಿಯಲ್ಲಿ ಬೆದರಿಕೆ:
ಮಡಿಕೇರಿ ನ್ಯಾಯಾಲಯಕ್ಕೂ ಕೂಡ ಕಿಡಿಗೇಡಿಗಳು ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ನ್ಯಾಯಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಸಂದೇಶ ಬಂದಿದೆ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಈ ಒಂದು ಸಂದೇಶ ಬಂದಿದೆ
ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. .
ನ್ಯಾಯಾಲಯದ ಕಲಾಪವನ್ನು ಸ್ಥಗಿತಗೊಳಿಸಿ ಸಂಕೀರ್ಣದ ಪ್ರತಿಯೊಂದು ಭಾಗವನ್ನೂ ಸೂಕ್ಷ್ಮವಾಗಿ ತಪಾಸಣೆ ನಡೆಸುತ್ತಿರುವ ಪೊಲೀಸರು ಅನುಮಾನಾಸ್ಪದ ವಸ್ತುಗಳ ಶೋಧ ನಡೆಸುತ್ತಿದ್ದಾರೆ. ಅಲ್ಲದೇ ಬೆದರಿಕೆ ಬಂದ ಇ-ಮೇಲ್ ಮೂಲ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.



























