ಸುಲಿಗೆಕೋರರು, ಬೈಕ್ ಕಳ್ಳರು, ಮನೆಗಳ್ಳನ ಬಂಧನ: 24.97 ಲಕ್ಷ ರೂ.ಮೌಲ್ಯದ ಸ್ವತ್ತು ಜಪ್ತಿ

ಕಲಬುರಗಿ,ಮಾ.5-ನಾಲ್ವರು ಸುಲಿಗೆಕೋರರು, ಇಬ್ಬರು ಬೈಕ್ ಕಳ್ಳರು ಮತ್ತು ಒಬ್ಬ ಮನೆಗಳನ್ನ ಬಂಧಿಸಿ 24.97 ಲಕ್ಷ ರೂ.ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಪ್ರಗತಿ ಕಾಲೋನಿಯ ಬಸಮ್ಮ ಡ್ಯಾಗೆ ಅವರು ಫೋನ್‍ನಲ್ಲಿ ಮಾತನಾಡುತ್ತ ಹೋಗುತ್ತಿದ್ದಾಗ ಅವರ ಕೊರಳಲ್ಲಿನ 10 ಗ್ರಾಂ.ಬಂಗಾರದ ಚೈನ್ ಕಿತ್ತುಕೊಂಡು ಸರಗಳ್ಳರು ಪರಾರಿಯಾಗಿದ್ದರು. ಈ ಸಂಬಂಧ ಬಸಮ್ಮ ಅವರು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮಹಾಲಕ್ಷ್ಮೀ ಲೇಔಟ್‍ನ ಕದಂಬ ಪಾಟಿ ಶೈಲಜಾ ಎಂಬುವವರು ಮನೆಗೆ ಬೀಗ ಹಾಕಿಕೊಂಡು ತಮ್ಮ ಊರಿಗೆ ಹೋಗಿದ್ದಾಗ ಕಳ್ಳರು ಮನೆ ಬೀಗ ಮುರಿದು 1.05 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಹೋಗಿದ್ದರು. ಈ ಸಂಬಂಧ ಅವರು ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇನ್ನು ಚೌಕ್ ಮತ್ತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದವು. ಓ ಪ್ರಕರಣಗಳ ಪತ್ತೆಗೆÉ ಎಸಿಪಿಗಳಾದ ಪ್ರವೀಣ್ ನಾಯಕ್, ಶರಣಬಸಪ್ಪ ಸುಬೇದಾರ ಅವರ ಮಾರ್ಗದರ್ಶನದಲ್ಲಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಗುರುಲಿಂಗಪ್ಪ ಗೌಡ ಮತ್ತು ಸಿಬ್ಬಂದಿ, ಚೌಕ್ ಪೊಲೀಸ್ ಠಾಣೆ ಪಿಐ ಸುಶೀಲಕುಮಾರ ಹಾಗೂ ಸಿಬ್ಬಂದಿ, ಆರ್.ಜಿ.ನಗರ ಪೊಲೀಸ್ ಠಾಣೆ ಪಿಐ ವಾಜೀದ್ ಪಟೇಲ್ ಹಾಗೂ ಸಿಬ್ಬಂದಿ ಮತ್ತು ಎಂ.ಬಿ.ನಗರ ಪೊಲೀಸ್ ಠಾಣೆ ಪಿಐ ಖಾಜಾ ಹುಸೇನ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ತನಿಖೆ ನಡೆಸಿ ಪ್ರಗತಿ ಕಾಲೋನಿಯಲ್ಲಿ ನಡೆದ ಸರ ಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮರ್ ಕಾಲೋನಿಯ ಅಬ್ಬು ಶೇಖ್ ಅಲಿಯಾಸ್ ಸ್ಪೀಡ್ ಅಬ್ಬು (32), ಬಿಲಾಲ್ ಬಾದ್ ಕಾಲೋನಿಯ ಮಾಜಿದ್ ಅಲಿಯಾಸ್ ಮಟ್ಕಾ ಮಾಜಿದ್ (32), ಸೋನಿಯಾಗಾಂಧಿ ಕಾಲೋನಿಯ ಶೇಖ್ ಹುಸೇನ್ ಅಲಿಯಾಸ್ ಬಿಸೇರಿ ಮತ್ತು ಮಿಲ್ಲತ್ ನಗರದ ಮಹ್ಮದ್ ಆರೀಫ್ ಎಂಬುವವರನ್ನು ಬಂಧಿಸಿ 1.50 ಲಕ್ಷ ರೂ.ಮೌಲ್ಯದ ಮಂಗಳಸೂತ್ರ, 3 ಬೈಕ್ ಮತ್ತು ವ್ಯಾನಿಟಿ ಬ್ಯಾಗ್ ಜಪ್ತಿ ಮಾಡಲಾಗಿದೆ. ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಂದರ್ಗಿಯ ಸುರೇಶ ಅಲಿಯಾಸ್ ಗಂಗಾರಾಮ ಚವ್ಯಾಣ್ ಎಂಬಾತನನ್ನು ಬಂಧಿಸಿ 6.75 ಲಕ್ಷ ರೂ.ಮೌಲ್ಯದ ಬಂಗಾರದ ಒಡವೆ ಜಪ್ತಿ ಮಾಡಲಾಗಿದೆ. ಇನ್ನು ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾಯಲ್‍ಗಲ್ಲಿಯ ಶೇಖ್ ನಿಸ್ಸಾರ್ ಅಹ್ಮದ್ ಎಂಬಾತನನ್ನು ಬಂಧಿಸಿ 3.90 ಲಕ್ಷ ರೂ.ಮೌಲ್ಯದ 8 ಬೈಕ್, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಳಗಿ ತಾಲ್ಲೂಕಿನ ಕೋರೂರ ಗ್ರಾಮದ ರಾಮಚಂದ್ರ ಹೊಸಮನಿ ಎಂಬಾತನನ್ನು ಬಂಧಿಸಿ 8.20 ಲಕ್ಷ ರೂ.ಮೌಲ್ಯದ 14 ಬೈಕ್ ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಸುಲಿಗೆಕೋರರು, ಬೈಕ್ ಕಳ್ಳರು ಮತ್ತು ಮನೆಗಳ್ಳನ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.
ಎಸಿಪಿಗಳಾದ ಪ್ರವೀಣ್ ನಾಯಕ್, ಶರಣಬಸಪ್ಪ ಸುಬೇದಾರ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಪಿಐ ಗುರುಲಿಂಗಪ್ಪ ಗೌಡ, ಚೌಕ್ ಪೊಲೀಸ್ ಠಾಣೆ ಪಿಐ ಸುಶೀಲಕುಮಾರ , ಆರ್.ಜಿ.ನಗರ ಪೊಲೀಸ್ ಠಾಣೆ ಪಿಐ ವಾಜೀದ್ ಪಟೇಲ್ ಮತ್ತು ಎಂ.ಬಿ.ನಗರ ಪೊಲೀಸ್ ಠಾಣೆ ಪಿಐ ಖಾಜಾ ಹುಸೇನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.