
ಕಲಬುರಗಿ,ಮಾ.1: ಭಾರತ 2014ರಲ್ಲಿ ವಿಶ್ವದ 10ನೇ ಅತಿ ದೊಡ್ಡ ಆರ್ಥಿಕತೆಯಾಗಿದ್ದು ಇಂದು 4.2 ಟ್ರಿಲಿಯನ್ ಅಮೆರಿಕನ್ ಡಾಲರ್‌ದೊಂದಿಗೆ 4ನೇ ಅತಿ ದೊಡ್ಡ ಆರ್ಥಿಕತೆಯಾಗಿ ಜಗತ್ತಿನಲ್ಲಿ ತನ್ನದೆ ಸ್ಥಾನ ಗಿಟ್ಟಿಸಿಕೊಂಡಿದೆ. ಅಲ್ಲದೆ 2030ರೊಳಗೆ ಜರ್ಮನಿಯನ್ನು ಮೀರಿಸಿ 7.3 ಟ್ರಿಲಿಯನ್ ಡಾಲರ್ ಆರ್ಥಿಕತೆಯೊಂದಿಗೆ 3ನೇ ಅತಿ ದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ ಎಂದು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ತಿಳಿಸಿದರು.
ಅವರು ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದ ಭೂ ವಿಜ್ಞಾನ ಶಾಲೆಯ ವತಿಯಿಂದ ಆಯೋಜಿಸಲಾದ ಎರಡು ದಿನಗಳ ಜಿಯೋಸ್ಫಿಯರ್ ಫೆಸ್ಟ್ಕಾರ್ಯಕ್ರಮದ ಅಂಗವಾಗಿ “ಹವಾಮಾನ ಬದಲಾವಣೆಯ ಆರ್ಥಿಕ ಪರಿಣಾಮ: ವಿಕಸಿತ ಭಾರತಕ್ಕೆ ಸಂಭವನೀಯ ಅಪಾಯ” ಎಂಬ ವಿಷಯದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ ಎಂದರೆ ಕೇವಲ ರಾಷ್ಟ್ರೀಯ ಆದಾಯದ ಹೆಚ್ಚಳವಲ್ಲ; ಇದುಮಾನವ ಅಭಿವೃದ್ಧಿ, ಸುಸ್ಥಿರ ಪರಿಸರ ಮತ್ತು ಜೀವವೈವಿಧ್ಯತೆ, ಎಲ್ಲರ ಒಳಗೊಳ್ಳವಿಕೆಯ ಅಭಿವೃದ್ಧಿ, ಸಂಶೋಧನೆ ಮತ್ತು ನವೀನತೆ, ರಫ್ತು ವೃದ್ಧಿ, ದೇಶದ ಶಾಂತಿ ಹಾಗೂ ಜನರ ಸಂತೋಷವನ್ನು ಒಳಗೊಂಡ ಸಮಗ್ರ ಅಭಿವೃದ್ಧಿಯಾಗಿದೆ ಎಂದು ಹೇಳಿದರು. ಈ ಕ್ಷೇತ್ರಗಳಲ್ಲಿ ಭಾರತ ಉತ್ತಮ ಪ್ರಗತಿ ಸಾಧಿಸುತ್ತಿದ್ದರೂ, ಹವಾಮಾನ ಬದಲಾವಣೆ ದೊಡ್ಡ ಸವಾಲಾಗಿ ಎದುರಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಸಿರುಮನೆ ಅನಿಲಗಳ ಪರಿಣಾಮದಿಂದ ಉಂಟಾಗುತ್ತಿರುವ ತಾಪಮಾನ ಏರಿಕೆ, ಅಸ್ಥಿರ ಮತ್ತು ಅನಿರೀಕ್ಷಿತ ಮಳೆಯ ಪ್ರಮಾಣ, ಗುಡುಗು ಮಳೆ, ಚಂಡಮಾರುತಗಳು, ಹರಿಕೇನ್‌ಗಳು, ಭೂಕಂಪಗಳು ಮತ್ತು ಬಲವಾದ ಗಾಳಿಗಳು ದೇಶಕ್ಕೆ ಭಾರೀ ಸಾಮಾಜಿಕ ಹಾಗೂ ಆರ್ಥಿಕ ನಷ್ಟವನ್ನುಂಟುಮಾಡಿವೆ ಎಂದು ಹೇಳಿದರು.
18ನೇ ಶತಮಾನದಲ್ಲಿ ಪಾಶ್ಚಾತ್ಯ ದೇಶಗಳಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾದ ನಂತರ ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರಿಂದ ಅಕ್ಕಿ, ಗೋಧಿ, ತೊಗರಿ, ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆ ಕುಸಿದು ಕೃಷಿ ಆದಾಯದ ಮೇಲೆ ದುಷ್ಪÀರಿಣಾಮ ಬೀರಿದೆ. 2022ರಲ್ಲಿ ಹವಾಮಾನದ ಪರಿಣಾಮಗಳಿಂದ ಭಾರತದ ಜಿಡಿಪಿಯ ಸುಮಾರು ಶೇ.8ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇದರ ದುಷ್ಪರಿಣಾಮ ಕಡಿಮೆಗೊಳಿಸಲು ಸರಿಯಾದ ಉಪಶಮನದ ಕ್ರಮಗಳನ್ನು ಕೈಗೊಳ್ಳದಿದ್ದರೆ 2070ರ ವೇಳೆಗೆ ಜಿಡಿಪಿಯ ಶೇ.24.7ರಷ್ಡು ನಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದರು. ಅಲ್ಲದೆ ದೇಶದ ಶೇ.91ರಷ್ಟು ಮಕ್ಕಳು ಕಳಪೆ ವಾಯು ಗುಣಮಟ್ಟದಿಂದ ಬಳಲುತ್ತಿದ್ದಾರೆ, ಶೇ.71ರಷ್ಡು ಜನರು ತೀವ್ರ ಉಷ್ಣ ಅಲೆಗಳನ್ನು ಅನುಭವಿಸಿದ್ದಾರೆ ಮತ್ತು ಶೇ.52ರಷ್ಟು ಜನರು ನೀರಿನ ಕೊರತೆ ಅಥವಾ ಬರಗಾಲದ ಸಮಸ್ಯೆ ಎದುರಿಸಿದ್ದಾರೆ ಎಂದು ಹೇಳಿದರು.
ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಪೆಟ್ರೋಲ್, ಡೀಸೆಲ್ ಮತ್ತು ಕಲ್ಲಿದ್ದಲು ಮುಂತಾದ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡಿ ಸೌರ, ಗಾಳಿ, ಜೈವಿಕ ಇಂಧನ, ಜಲವಿದ್ಯುತ್ ಮತ್ತು ಭೂತಾಪ ಶಕ್ತಿಯಂತಹ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ಅದರ ಮರುಬಳಕೆ ಮತ್ತು ಮರುಸಂಸ್ಕರಣೆ ಕ್ರಮಗಳನ್ನು ಸಂವಿಧಾನಾತ್ಮಕವಾಗಿ ಕಡ್ಡಾಯಗೊಳಿಸಬೇಕು ಎಂದರು. ಹವಾಮಾನ ಸಹಿಷ್ಣು ಕೃಷಿ, ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ, ಪರಿಸರ ವ್ಯವಸ್ಥೆಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು. ಹಸಿರು ಮೂಲಸೌಕರ್ಯ, ಹಸಿರು ಬ್ಯಾಂಕಿAಗ್, ಕಾರ್ಬನ್ ಶೋಷಕ ವಲಯಗಳು ಮತ್ತು ಹಸಿರು ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಅವರು ಒತ್ತಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭೂ ವಿಜ್ಞಾನ ಶಾಲೆಯ ಡೀನ್ ಪ್ರೊ. ಪ್ರಶಾಂತ್ ಎಂ ಮಾತನಾಡಿ, ಹವಾಮಾನ ಬದಲಾವಣೆ ಎಲ್ಲರ ಮೇಲೂ ಮತ್ತು ಎಲ್ಲಾ ಪ್ರದೇಶಗಳ ಮೇಲೂ ಪರಿಣಾಮ ಬೀರುತ್ತಿದ್ದು, ಆದಾಯ, ಆಸ್ತಿ, ಪ್ರಾಣಿಗಳು ಹಾಗೂ ಮಾನವ ಜೀವಗಳಿಗೆ ಮರಳಿಸಲಾಗದ ನಷ್ಟ ಉಂಟುಮಾಡುತ್ತಿದೆ ಎಂದು ಹೇಳಿದರು. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡಲು ಬಹುಆಯಾಮದ ದೃಷ್ಟಿಕೋನವನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಮೊಹಮ್ಮದ್ ಇಸ್ಲಾಂ, ಪ್ರೊ. ಲಿಂಗದೇವರು, ಡಾ. ಅರ್ಚನಾ ಕಜೂರ್, ಡಾ. ಬಾಬು ನಲ್ಲಸ್ವಾಮಿ, ಡಾ. ಮಹಾಲಿಂಗ, ಡಾ. ಅಶೋಕ್ ಕುಮಾರ್, ಡಾ. ಬಿ.ಚಿ.ವಿಶ್ವನಾಥ್, ಡಾ. ರೋಶ್ನಿ ಪಾಟೇಡ್, ಡಾ. ಅಜೀಮ್ ಪಾಷಾ, ಡಾ. ನೋಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



























