
ಬೆಂಗಳೂರು, ಏ. ೫- ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು ೨ ದಿನಗಳಷ್ಟೇ ಬಾಕಿ ಇದ್ದು, ಚುನಾವಣಾ ಪ್ರಚಾರದ ಕಾವು ತಾರಕಕ್ಕೇರಿದೆ.
ಈ ಉಪಚುನಾವಣೆಯ ಗೆಲುವು ರಾಜ್ಯದ ಭವಿಷ್ಯದ ರಾಜಕಾರಣಕ್ಕೆ ದಿಕ್ಸೂಚಿಯಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗೆಲುವಿಗಾಗಿ ಎಲ್ಲಾ ರೀತಿಯ ಚುನಾವಣಾ ಕಾರ್ಯತಂತ್ರಗಳನ್ನು ಹೆಣೆದಿವೆ.
ಈ ಎರಡು ಕ್ಷೇತ್ರಗಳಲ್ಲೂ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಡಿಸಿದ್ದು, ಗೆಲುವಿಗಾಗಿ ಎರಡೂ ಪಕ್ಷಗಳ ನಡುವೆ ಜಿದ್ದಾಜಿದ್ದಿಯ ಪೈಪೋಟಿ ನಡೆದಿದೆ.

ಈ ಉಪಚುನಾವಣೆಯ ಗೆಲುವು ರಾಜಕೀಯವಾಗಿ ಮಹತ್ವಪಡೆದುಕೊಂಡಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳು ಕ್ಷೇತ್ರದಲ್ಲೇ ಬೀಡು ಬಿಟ್ಟು ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಇನ್ನಿಲ್ಲದ ಹರಸಾಹಸ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದರೆ, ಬಿಜೆಪಿ ಸಹ ಕಾಂಗ್ರೆಸ್ಗೆ ಸೆಡ್ಡು ಹೊಡೆಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕರುಗಳಾದ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರುಗಳು, ಕೇಂದ್ರ ಸಚಿವರಾದ ವಿ. ಸೋಮಣ್ಣ, ಪ್ರಹ್ಲಾದ್ ಜೋಷಿ. ಶೋಭ ಕರಂದ್ಲಾಜೆ, ಹೆಚ್.ಡಿ. ಕುಮಾರಸ್ವಾಮಿ ರವರೊಂದಿಗೆ ಸೇರಿ ಗೆಲುವಿಗೆ ಅಬ್ಬರದ ಪ್ರಚಾರ ನಡೆಸಿದೆ.
ಇದೇ ತಿಂಗಳ ೯ ರಂದು ಉಪಚುನಾವಣೆಗೆ ಮತದಾನ ನಡೆಯಲಿದ್ದು, ಬರುವ ಮಂಗಳವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗೆಲುವಿಗೆ ನೇರ ಹಣಾಹಣಿ ನಡೆದಿದೆ.
ಬಿರು ಬಿಸಿಲನ್ನು ಲೆಕ್ಕಿಸದೆ ಎರಡು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳು ತಮ್ಮ ಕಾರ್ಯಕರ್ತರ ಪಡೆಯನ್ನು ಹಿಂದಿಟ್ಟುಕೊಂಡು ಎರಡೂ ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರ ನಡೆಸಿದ್ದಾರೆ.
ಎರಡು ಪಕ್ಷಗಳು ಸೇರಿಗೆ ಸವ್ವಾಸೇರು ಎಂಬಂತೆ ಎರಡೂ ಕ್ಷೇತ್ರಗಳಲ್ಲೂ ರ್ಯಾಲಿ, ಸಮಾವೇಶಗಳನ್ನು ನಡೆಸಿ ಪರಸ್ಪರ ಆರೋಪ-ಪ್ರತ್ಯಾರೋಪಗಳೊಂದಿಗೆ ವಾಕ್ಸಮರವನ್ನೂ ನಡೆಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಎರಡು ಕ್ಷೇತ್ರಗಳ ಗೆಲುವು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ರಾಜ್ಯದ ಇಡೀ ಸಚಿವ ಸಂಪುಟವೇ ಬೀಡು ಬಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರಗಳನ್ನು ಹೆಣೆದಿದ್ದಾರೆ.
ವಿಪಕ್ಷವಾದ ಬಿಜೆಪಿ ಸಹ ಕಾಂಗ್ರೆಸ್ಗೆ ಸೆಡ್ಡು ಹೊಡೆಯುವಂತೆ ಪ್ರಚಾರ ನಡೆಸಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರುಗಳಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರುಗಳಾದ ಶ್ರೀರಾಮುಲು, ಸಿ.ಟಿ. ರವಿ, ಸುನೀಲ್ಕುಮಾರ್, ರಾಜುಗೌಡ, ಸಂಸದ ಗೋವಿಂದ ಕಾರಜೋಳ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೇರಿದಂತೆ ಬಿಜೆಪಿಯ ಎಲ್ಲ ಪ್ರಮುಖ ನಾಯಕರುಗಳು ಎರಡು ಕ್ಷೇತ್ರಗಳಲ್ಲಿ ಬೀಡು ಬಿಟ್ಟು ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದಾರೆ. ಇವರ ಜತೆಗೆ ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಶೋಭ ಕರಂದ್ಲಾಜೆ ಸಹ ಪಕ್ಷದ ಅಭ್ಯರ್ಥಿಗಳ ಪ್ರಚಾರದಲ್ಲಿ ತೊಡಗಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಎಸ್ ಸಹ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸಿದ್ದು, ಇಂದು ಮತ್ತು ನಾಳೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಭಾಗಿಯಾಗಲಿದ್ದು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಕುಮಾರಸ್ವಾಮಿ ಸಹ ಟೊಂಕಕಟ್ಟಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಎರಡೂ ಕ್ಷೇತ್ರಗಳಲ್ಲೂ ಗೆದ್ದು ತಮ್ಮ ನಾಯಕತ್ವವನ್ನು ಸಾಬೀತುಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹವಣಿಸುತ್ತಿದ್ದರೆ, ಇತ್ತ ಬಿಜೆಪಿ ಪಾಳಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಭದ್ರಕೋಟೆಯನ್ನು ವಶಪಡಿಸಿಕೊಂಡು ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಉಮೇದಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರುಗಳು ಮತದಾರರನ್ನು ಓಲೈಸಲು ನಾನಾ ಕಸರತ್ತುಗಳನ್ನು ನಡೆಸಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿದ್ದರಾದರೂ ಮತದಾರನ ಒಲವು ಯಾರ ಕಡೆ ಎಂಬುದು ಕುತೂಹಲ ಮೂಡಿಸಿದೆ.
ಎರಡೂ ಕ್ಷೇತ್ರಗಳಲ್ಲ ಮತದಾರರ ತೀರ್ಪು ಏನು ಎಂಬುದು ಮತ ಎಣಿಗೆ ನಡೆಯುವ ಮೇ ೪ ರಂದು ಬಹಿರಂಗಗೊಳ್ಳಲಿದೆ.






















