Home ಮುಖಪುಟ ಸುದ್ದಿ ಡಾ. ರಾಜ್ ಪುಣ್ಯಸ್ಮರಣೆ: ಸಮಾಧಿ ಬಳಿ ವಿಶೇಷ ಪೂಜೆ

ಡಾ. ರಾಜ್ ಪುಣ್ಯಸ್ಮರಣೆ: ಸಮಾಧಿ ಬಳಿ ವಿಶೇಷ ಪೂಜೆ

ಬೆಂಗಳೂರು, ಏ.೧೨- ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಂಗಳದಲ್ಲಿರುವ ಅಣ್ಣಾವ್ರ ಸಮಾಧಿಗೆ ಕುಟುಂಬ ಸದಸ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಮಾಧಿಯನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದ್ದು, ಬೆಳಗ್ಗೆಯಿಂದಲೇ ಅಭಿಮಾನಿಗಳು ಹೂಗುಚ್ಛ ಅರ್ಪಿಸಿ ಜೈಕಾರ ಕೂಗುತ್ತಾ ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದರು.

ರಾಜ್ಯದ ಮೂಲೆಮೂಲೆಗಳಿಂದ ಬಂದ ಅಭಿಮಾನಿಗಳು ಅಣ್ಣಾವ್ರ ನೆನಪಿನಲ್ಲಿ ಭಾವುಕರಾದರು. ಕೆಲವರು ಕಣ್ಣೀರಿಟ್ಟು ತಮ್ಮ ಆರಾಧ್ಯ ದೈವವನ್ನು ನೆನೆದ ದೃಶ್ಯಗಳು ಮನಕಲಕುವಂತಿದ್ದವು. ಪುಣ್ಯಸ್ಮರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಅನ್ನಸಂತರ್ಪಣೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದರು. ಬಿಸಿಲಲ್ಲಿ ಬಂದ ಜನತೆಗೆ ಪಾನಕ, ಮಜ್ಜಿಗೆ ವಿತರಣೆ ಮಾಡುವ ಮೂಲಕ ಸೇವಾ ಮನೋಭಾವ ಮೆರೆದರು.

ಅಣ್ಣಾವ್ರ ಸಮಾಧಿ ಬಳಿಯಲ್ಲಿ ಸಾವಿರಾರು ಜನರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕಡೆಗಳಲ್ಲಿ ಅಭಿಮಾನಿಗಳು ಮಜ್ಜಿಗೆ, ಪಾನಕ ಹಂಚಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು.

ಡಾ. ರಾಜ್ ಕುಮಾರ್ ಅವರು ನಮ್ಮೊಂದಿಗೆ ಇರದಿದ್ದರೂ, ಅವರ ಕಲಾ ಪಯಣ, ವ್ಯಕ್ತಿತ್ವ ಹಾಗೂ ಮಾನವೀಯತೆ ಎಂದೆಂದಿಗೂ ಜೀವಂತವಾಗಿಯೇ ಇರುತ್ತವೆ. ಕನ್ನಡಿಗರ ಹೃದಯದಲ್ಲಿ ಡಾ. ರಾಜ್ ಹಚ್ಚ ಹಸಿರಾಗಿ ಉಳಿದಿದ್ದಾರೆ.

ಕನ್ನಡ ಚಿತ್ರರಂಗದ ಮೇರುನಟ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರು ಭೌತಿಕವಾಗಿ ನಮ್ಮೊಂದಿಗಿಲ್ಲದೆ ಇಂದಿಗೆ ೨೦ ವರ್ಷಗಳು ಕಳೆದಿವೆ. ೨೦೦೬ರ ಏಪ್ರಿಲ್ ೧೨ರಂದು ಅವರು ನಿಧನರಾಗಿದ್ದರೂ, ಅವರ ನೆನಪು, ಅವರ ಕಲಾ ವೈಭವ ಹಾಗೂ ಅಭಿಮಾನಿಗಳ ಮನದಲ್ಲಿರುವ ಪ್ರೀತಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಕಾಲ ಎಷ್ಟೇ ಮುಂದುವರಿದರೂ ಅಣ್ಣಾವ್ರ ಮೇಲಿನ ಅಭಿಮಾನ ಮಾತ್ರ ಕಡಿಮೆಯಾಗದೆ ಹೆಚ್ಚಾಗುತ್ತಲೇ ಇದೆ.

ಏಪ್ರಿಲ್ ೧೨ ಅಂದರೆ ಅಣ್ಣಾವ್ರ ಕುಟುಂಬದವರಿಗೂ, ಕೋಟ್ಯಂತರ ಅಭಿಮಾನಿಗಳಿಗೂ ಕರಾಳ ದಿನ. ಕನ್ನಡದ ಜನಮನ ಗೆದ್ದ ಈ ಮಹಾನ್ ನಟ ಕೊನೆಯುಸಿರು ಎಳೆದ ದಿನವನ್ನು ರಾಜ್ಯದಾದ್ಯಂತ ಭಾವುಕತೆಯಿಂದ ಸ್ಮರಿಸಲಾಗುತ್ತಿದೆ. ಹಳೆಯ ತಲೆಮಾರಿನವರಷ್ಟೇ ಅಲ್ಲ, ಇಂದಿನ ಜೆನ್-ಜಿ ಪ್ರೇಕ್ಷಕರೂ ಕೂಡ ಅಣ್ಣಾವ್ರ ಸಿನಿಮಾಗಳನ್ನು ನೋಡಿ ಮನಸೋಲುತ್ತಿರುವುದು ಅವರ ಶಾಶ್ವತ ಜನಪ್ರಿಯತೆಯ ಸಾಕ್ಷಿಯಾಗಿದೆ.

ಸುಮಾರು ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಡಾ. ರಾಜ್ ಕುಮಾರ್ ಅವರು ನಿರ್ವಹಿಸಿದ ಪಾತ್ರಗಳು ಇಂದಿಗೂ ಜೀವಂತವಾಗಿವೆ. “ಆಡುಮುಟ್ಟದ ಸೊಪ್ಪಿಲ್ಲ, ಅಣ್ಣಾವ್ರು ಅಭಿನಯಿಸದ ಪಾತ್ರವಿಲ್ಲ” ಎಂಬ ಮಾತು ಅವರ ಅಭಿನಯ ವೈವಿಧ್ಯತೆಯನ್ನು ಸ್ಪಷ್ಟಪಡಿಸುತ್ತದೆ. ಐದು ದಶಕಗಳ ಕಾಲ ಕನ್ನಡ ಬೆಳ್ಳಿತೆರೆಯನ್ನು ಆಳಿದ ಅವರು ನಟಸಾರ್ವಭೌಮ, ಗಾನ ಗಂಧರ್ವ, ರಣಧೀರ ಕಂಠೀರವ ಸೇರಿದಂತೆ ಅನೇಕ ಬಿರುದಾವಳಿಗಳನ್ನು ಪಡೆದ ಏಕೈಕ ನಟ.