
ಕಲಬುರಗಿ,ಏ 5: ಭಾರತದ ಮಾಜಿ ಉಪಪ್ರಧಾನಿ, ಕೃಷಿ, ಕಾರ್ಮಿಕ, ರೈಲ್ವೆ, ದೂರ ಸಂಪರ್ಕ, ರಕ್ಷಣೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಡಾ.ಬಾಬು ಜಗಜೀವನರಾಮ್ ಅವರು ಬರದ ನಾಡಾಗಿದ್ದ ಭಾರತದಲ್ಲಿ ಕೃಷಿ ಇಳುವರಿ ಹೆಚ್ಚಿಸಲು ಕೈಗೊಂಡ ಕ್ರಮಗಳಿಂದಾಗಿ ಪರಿಣಾಮಕಾರಿ ಹಸಿರು ಕ್ರಾಂತಿ ನೆರವೇರಿಸಿದರು ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಅಭಿಪ್ರಾಯಪಟ್ಟರು.
ಡಾ. ಬಾಬು ಜಗಜೀವನರಾಮ್ ಜಿಲ್ಲಾ ಜಯಂತ್ಯುತ್ಸವ ಸಮಿತಿಯು ನಗರದ ಜಗಜೀವನರಾಮ್ ಅವರ ಪ್ರತಿಮೆ ಆವರಣದಲ್ಲಿ ಶನಿವಾರ ಅಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ತೀವ್ರವಾದ ಬರಗಾಲದಿಂದಾಗಿ ಭಾರತದಲ್ಲಿ ಧಾನ್ಯಗಳ ಉತ್ಪನ್ನ ಕಡಿಮೆಯಾಗಿತ್ತು. ಹೀಗಾಗಿ, ಅಂದಿನ ಪ್ರಧಾನಿ ವಿದೇಶಗಳಿಗೆ ಹೋದಾಗ ಭಿಕ್ಷುಕರ ಪ್ರಧಾನಿ ಬಂದರು ಎಂದು ಅಲ್ಲಿನವರು ಹೀಯಾಳಿಸುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ದೇಶದಲ್ಲಿನ ಕೃಷಿ ಉತ್ಪಾದನೆ ಹೆಚ್ಚಿಸುವಂತೆ ಕೃಷಿ ಸಚಿವರಾಗಿದ್ದ ಜಗಜೀವನರಾಮ್ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ಭಾಕ್ರಾನಂಗಲ್ ಅಣೆಕಟ್ಟು ನಿರ್ಮಿಸಿ ನೀರಾವರಿ ಕಲ್ಪಿಸಿದರು. ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಅತ್ಯಾಧುನಿಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದರು
ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ ಪ್ರಾಂಶುಪಾಲ ಮಲ್ಲಿಕಾರ್ಜುನ ಸಾವರಕರ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ರಚನೆಯಾದ ಮದ್ಯಂತರ ಸರಕಾರದಲ್ಲಿ ಬಾಬೂಜಿ ಅವರು ಕಾರ್ಮಿಕ ಖಾತೆಯನ್ನು ನಿರ್ವಹಿಸಿದ್ದರು.
ಆಗಲೇ ಕಾರ್ಮಿಕರಿಗೆ ಕನಿಷ್ಠ ವೇತನ ಸೇರಿದಂತೆ ವಿವಿಧ ಕಾರ್ಮಿಕ ಪರ 12ಕ್ಕೂ ಅಧಿಕ ಕಾಯಿದೆಗಳನ್ನು ರೂಪಿಸಿದ್ದರು. ದೂರಸಂಪರ್ಕ ಖಾತೆ ಸಚಿವರಾಗಿದ್ದಾಗ ಎರಡು ಗ್ರಾಮಗಳಿಗೆ ಒಂದರಂತೆ ಅಂಚೆ ಕಚೇರಿಗಳನ್ನು ತೆರೆದರು ಎಂದರು.
ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜರು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ,ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ,ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಜಿಲ್ಲಾ ಜಯಂತ್ಯುತ್ಸವ ಸಮಿತಿ ಗೌರವಾಧ್ಯಕ್ಷ ವಿಜಯಕುಮಾರ ರಾಮಕೃಷ್ಣ,ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ದೊಡ್ಡಮನಿ,ಕಾರ್ಯಾಧ್ಯಕ್ಷ ಶರಣು ಸಗರಕರ್, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ ಅಳೋಳ್ಳಿ,ಕಾರ್ಯಾಧ್ಯಕ್ಷ ಪ್ರದೀಪ ಬಾಚನಳ್ಳಿ,ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ,ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ,ಮುಖಂಡರಾದ ರಾಜು ವಾಡೇಕರ್, ಗೀತಾ ವಾಡೇಕರ್ , ಲಿಂಗರಾಜ ತಾರಫೈಲ್, ಪರಮೇಶ್ವರ ಖಾನಾಪುರ,ದಶರಥ ಕಲಗುರ್ತಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.




















