Home ಜಿಲ್ಲೆ ಕಲಬುರಗಿ ಸಮ ಸಮಾಜ ಕಟ್ಟುವ ಕೆಲಸ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್: ಡಾ.ಶರಣಪ್ರಕಾಶ ಪಾಟೀಲ

ಸಮ ಸಮಾಜ ಕಟ್ಟುವ ಕೆಲಸ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್: ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ,ಏ.13-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಎಲ್ಲ ಜನರ ಏಳಿಗೆಗಾಗಿ ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಜಗತ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಜಯಂತ್ಯುತ್ಸವ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ದೇಶದಲ್ಲಿ ಮೂರು ಜನರ ಜಯಂತಿಗಳನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಮಹಾನ್ ದಾರ್ಶನಿಕ ಭಗವಾನ್ ಬುದ್ಧ, ಮಹಾನ್ ಮಾನವತಾವಾದಿ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರದು. ಈ ಮೂವರು ಸಮಾನತೆಗಾಗಿ ಹಾಗೂ ಸನ್ಮಾರ್ಗಕ್ಕಾಗಿ ಜೀವನ ನಡೆಸಿದ್ದಾರೆ. ಅದರಲ್ಲೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿನ ಸಮಾಜದಲ್ಲಿ ಮೇಲು, ಕೀಳು ಅಸಮಾನತೆ ತೊಳೆಯುವ ಮಹಾನ ಕೆಲಸ ಮಾಡಿ ಎಲ್ಲರಿಗೂ ಹಕ್ಕುಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಶಾಸಕ ಅಲ್ಲಮಪ್ರಭು ಪಾಟೀಲ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು “ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದರು. ನಾವು ಇತಿಹಾಸ ಅರಿಯುವ ಕೆಲಸ ಮಾಡಬೇಕು. ಸಂವಿಧಾನ ನಮ್ಮೆಲ್ಲರಿಗೂ ಕೂಡ ಭಗವದ್ಗೀತೆಯಾಗಿದೆ. ದೇಶದ ಕಟ್ಟಕಡೆಯ ಮನುಷ್ಯನೂ ಕೂಡ ರಾಷ್ಟ್ರಪತಿಯಾಗಬಹುದು ಎಂದು ಹೇಳಿದ್ದು ನಮ್ಮ ಶ್ರೇಷ್ಠ ಸಂವಿಧಾನ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, ನಗರದಲ್ಲಿ ಮಾಡುತ್ತಿರುವ ಜಯಂತ್ಯುತ್ಸವ ಎಲ್ಲ ರೀತಿಯ ಇತಿಹಾಸ ನಿರ್ಮಿಸುತ್ತಿದೆ. ಮಾನವನಾಗಿ ಜನ್ಮ ತಾಳಿದ ಮೇಲೆ ನಾವು ಯಾವ ರೀತಿ ಬದುಕಬೇಕು ಎಂದು ಸಂವಿಧಾನದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಅಣದೂರಿನ ಭಂತೆ ವರಜ್ಯೋತಿ ಸಾನಿಧ್ಯವಹಿಸಿದ್ದರು. ಶಾಸಕಿ ಕನಿಜ್ ಫಾತಿಮಾ, ಮೇಯರ್ ವರ್ಷಾ ರಾಜೀವ್ ಜಾನೆ, ಕೂಡಾ ಅಧ್ಯಕ್ಷ ಮಜರ್ ಆಲಂ ಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಜಿಲ್ಲಾ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಅಶೋಕ ವೀರನಾಯಕ, ಕಾರ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ, ಸಂತೋಷ ಹಾದಿಮನಿ, ಅರುಣ ಕರುಣೆ, ದಿನೇಶ ದೊಡ್ಡಮನಿ ಸೇರಿದಂತೆ ಮತ್ತಿತರರು ಇದ್ದರು.