
ಬೀದರ:ಮಾ.೯:ಬೀದರ ಜಿಲ್ಲೆಯಲ್ಲಿ ಮತ್ತು ಹುಲಸೂರ ಹಾಗೂ ಬಸವಕಲ್ಯಾಣ ತಾಲೂಕುಗಳಲ್ಲಿ ಕಲಾವಿದರಿಗೆ ಮಸಾಶನ (ಪಿಂಚಣಿ) ಮಾಡಿಕೊಡುತ್ತೇವೆ ಎಂದು ಹೇಳಿ ಕೆಲವು ದಲ್ಲಾಳಿಗಳು ಕಲಾವಿದರಿಗೆ ಅಮಿಷ ಒಡ್ಡಿ ಹಣ ದೋಚುತ್ತಿರುವ ಪ್ರಕರಣಗಳು ಹೆಚ್ಚಾಗಿವೆ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಕಲಾವಿದರು ಯಾವುದೇ ಮಧ್ಯವರ್ತಿಗಳ ಮಾತಿಗೆ ಒಳಗಾಗದೆ ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗೆ ಭೇಟಿ ನೀಡಿ ಸ್ವತಃ ಅರ್ಜಿ ಸಲ್ಲಿಸಬೇಕು ಎಂದು ಸದಸ್ಯರು ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವಿಜಯಕುಮಾರ್ ಸೋನಾರೆ ಅವರು ಮನವಿ ಮಾಡಿದ್ದಾರೆ.
ಕಲಾವಿದರ ಸೌಲಭ್ಯಗಳ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಹಣ ವಸೂಲಿ ಮಾಡುವ ಮೂಲಕ ಕಲಾವಿದರ ಗೌರವ ಘನತೆಗೆ ಧಕ್ಕೆ ತಂದು ಅವರ ಕಲಾವೃತ್ತಿಗೆ ಅಪಮಾನ ಮಾಡಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಸರ್ಕಾರದಿಂದ ನೀಡಲಾಗುವ ಮಸಾಶನ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳವಾಗಿದ್ದು, ಇದಕ್ಕಾಗಿ ಯಾವುದೇ ಮಧ್ಯವರ್ತಿಗಳ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ರೀತಿಯ ದಲ್ಲಾಳಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಹಾಯಕ ನಿರ್ದೇಶಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿಜಯಕುಮಾರ್ ಸೋನಾರೆ ಅವರು ಆಗ್ರಹಿಸಿದ್ದಾರೆ.
ಕಲಾವಿದರು ಜಾಗೃತರಾಗಿದ್ದು, ಯಾರಿಗೂ ಹಣ ನೀಡದೆ ನೇರವಾಗಿ ಇಲಾಖೆಯ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಮಾತ್ರ ಇಂತಹ ಮೋಸಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವೆಂದು ಅವರು ತಿಳಿಸಿದ್ದಾರೆ.


























