ಡಿಕೆಶಿ ರಾಹುಲ್ ಭೇಟಿ

ಬೆಂಗಳೂರು, ಫೆ. ೧೨- ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ನಾಯಕತ್ವ ಜಟಾಪಟಿ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಕೊನೆಗೂ ಉಪಮುಖ್ಮಯಂತ್ರಿ ಡಿ.ಕೆ.ಶಿವಕುಮಾರ್ ಇಂದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಕಾಂಗ್ರೆಸ್‌ನಲ್ಲಿ ಸಂಚಲನ ಮೂಡಿಸಿದೆ.


ಹಲವು ದಿನಗಳಿಂದ ರಾಹುಲ್‌ಗಾಂಧಿ ಅವರ ಭೇಟಿಗಾಗಿ ಪ್ರಯತ್ನ ನಡೆಸಿದ್ದ ಡಿ.ಕೆ. ಶಿವಕುಮಾರ್ ಅವರು, ಇಂದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯದ ಎಲ್ಲ ವಿದ್ಯಮಾನಗಳನ್ನು ಅವರ ಗಮನಕ್ಕೆ ತಂದು ಅಧಿಕಾರ ಹಂಚಿಕೆ, ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷಗಿರಿ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.


ಅಸ್ಸಾಂ ವಿಧಾನಸಭಾ ಚುನಾಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಜತೆ ಇಂದು ದೆಹಲಿಯಲ್ಲಿರುವ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಮೊದಲಿಗೆ ಪ್ರಿಯಾಂಕ ಗಾಂಧಿ ನಂತರ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಡಿ.ಕೆ.ಶಿವಕುಮಾರ್, ಅಸ್ಸಾಂ ಚುನಾವಣೆಯ ಚರ್ಚೆ ಬಳಿಕ ರಾಹುಲ್‌ಗಾಂಧಿ ಅವರ ಜತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.


ರಾಜ್ಯ ರಾಜಕಾರಣದ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ರಾಹುಲ್‌ಗಾಂಧಿ ಅವರ ಜತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ, ಪ್ರಿಯಾಂಕ ಗಾಂಧಿ ಸಹ ಉಪಸ್ಥಿತರಿದ್ದರು.


ಈ ಮೂವರ ಜತೆಯೂ ಡಿ.ಕೆ. ಶಿವಕುಮಾರ್ ಸುದೀರ್ಘ ಮಾತುಕತೆ ನಡೆಸಿ ತಮ್ಮ ಪಕ್ಷ ನಿಷ್ಠೆ, ಪಕ್ಷ ಸೇವೆ ಎಲ್ಲವನ್ನು ಅವರ ಗಮನಕ್ಕೆ ತಂದು ತಮ್ಮ ಶ್ರಮಕ್ಕೆ ಪ್ರತಿಫಲ ನೀಡಿ ಎಂದು ಮನವಿ ಮಾಡಿದರು ಎನ್ನಲಾಗಿದೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಗಿರುವ ಅಧಿಕಾರ ಹಂಚಿಕೆಯ ಒಪ್ಪಂದದಂತೆ ನಾವೆಲ್ಲ ನಡೆದುಕೊಳ್ಳಬೇಕಿದೆ. ಅದರಂತೆ ನನಗೂ ಉನ್ನತ ಹುದ್ದೆಗೆ ಅವಕಾಶ ಮಾಡಿಕೊಡಿ ಎಂದು ಡಿ.ಕೆ. ಶಿವಕುಮಾರ್ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.


ಅಧಿಕಾರ ಹಂಚಿಕೆಯ ಜಟಾಪಟಿಗೆ ಆದಷ್ಟು ಬೇಗ ತೆರೆ ಎಳೆಯಿರಿ. ಒಂದು ಸ್ಪಷ್ಟ ತೀರ್ಮಾನವನ್ನು ಶೀಘ್ರ ಪ್ರಕಟಿಸಿ ಎಂಬ ಬೇಡಿಕೆಯನ್ನು ಇಟ್ಟರು ಎಂದು ಡಿ.ಕೆ. ಶಿವಕುಮಾರ್ ಅವರ ಆಪ್ತ ಮೂಲಗಳು ಹೇಳಿವೆ.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಹವಾಲನ್ನು ಆಲಿಸಿದ ರಾಹುಲ್‌ಗಾಂಧಿ ಅವರು ನಿಮ್ಮ ಪಕ್ಷನಿಷ್ಠೆ, ಸೇವೆ ನಮ್ಮ ಗಮನದಲ್ಲಿದೆ. ನಿಮ್ಮ ಮೇಲೆ ನಮಗೆ ಪ್ರೀತಿ ಅಭಿಮಾನ ಎಲ್ಲವೂ ಇದೆ. ಆದಷ್ಟು ಬೇಗ ತೀರ್ಮಾನ ಮಾಡುತ್ತೇವೆ ಸ್ವಲ್ಪ ತಾಳ್ಮೆಯಿಂದ ಕಾಯಿರಿ ಎಂದು ಹೇಳಿದರು ಎನ್ನಲಾಗಿದೆ.


ಅಧಿಕಾರ ಹಂಚಿಕೆಯ ಬಗ್ಗೆ ಏಕಾಏಕಿ ಒಂದು ತೀರ್ಮಾನಕ್ಕೆ ಬರಲು ಈಗಲೇ ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ದೆಹಲಿಗೆ ಕರೆಸಿ ಮಾತನಾಡುತ್ತೇವೆ. ನಂತರ ಒಂದು ತೀರ್ಮಾನಕ್ಕೆ ಬರುತ್ತೇವೆ ಎಂಬ ಭರವಸೆಯನ್ನು ರಾಹುಲ್, ಸೋನಿಯಾಗಾಂಧಿ ಅವರು ಶಿವಕುಮಾರ್ ಅವರಿಗೆ ನೀಡಿದರು ಎಂದು ಹೇಳಲಾಗಿದೆ.


ಎರಡು ದಿನಗಳ ಹಿಂದೆ ಕಾಂಗ್ರೆಸ್‌ನ ದೊಡ್ಡ ನಾಯಕರು ಕರೆದಿದ್ದಾರೆ ಎಂದು ದೆಹಲಿಗೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಹುಲ್‌ಗಾಂಧಿ ಭೇಟಿಗೆ ದೆಹಲಿಯಲ್ಲಿ ಕಾದು ಕುಳಿತಿದ್ದರು. ನಿನ್ನೆ ರಾಹುಲ್ ಅವರನ್ನು ಭೇಟಿ ಮಾಡುವ ಪ್ರಯತ್ನ ಸಾಧ್ಯವಾಗಿರಲಿಲ್ಲ. ಆದರೆ ಇಂದು ಬೆಳಗ್ಗೆಯೇ ಡಿ.ಕೆ. ಶಿವಕುಮಾರ್, ರಾಹುಲ್ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು


ದೆಹಲಿಯ ಜನಪತ್ ರಸ್ತೆಯಲ್ಲಿರುವ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ೧೦.೩೦ರ ಸುಮಾರಿಗೆ ರಾಹುಲ್‌ಗಾಂಧಿ ಅವರನ್ನು ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದರು.


ಸೋನಿಯಾಗಾಂಧಿ ಅವರ ನಿವಾಸದಲ್ಲಿ ನಡೆದ ಈ ಚರ್ಚೆಯಲ್ಲಿ ರಾಹುಲ್‌ಗಾಂಧಿ, ಸೋನಿಯಾಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸಹ ಉಪಸ್ಥಿತರಿದ್ದರು.
ಈ ಮೂವರು ಕಾಂಗ್ರೆಸ್‌ನ ವರಿಷ್ಠ ನಾಯಕರು ಡಿ.ಕೆ.ಶಿವಕುಮಾರ್ ಅವರ ಜತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು, ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.


ಪಕ್ಷಕ್ಕಾಗಿ ನಾನು ದುಡಿದ್ದೇನೆ. ನನ್ನ ದುಡಿಮೆ ಶ್ರಮಕ್ಕೆ ವರಿಷ್ಠರ ಬಳಿ ಕೂಲಿ ಕೇಳುತ್ತೇನೆ ಎಂದು ಹಿಂದೆಯೇ ಹಲವಾರು ಬಾರಿ ಹೇಳಿದ್ದ ಡಿ.ಕೆ. ಶಿವಕುಮಾರ್, ಇಂದು ವರಿಷ್ಠರ ಮುಂದೆ ಮನಬಿಚ್ಚಿ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿಯ ೧೦ ಜನಪಥ್‌ನಲ್ಲಿ ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕಾ ವಾರ್ದಾ ಅವರನ್ನು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ಭೇಟಿ ಮಾಡಿ ಹೊರ ಬರುತ್ತಿರುವುದು. ಛತ್ತೀಸ್‌ಘಡದ ಮಾಜಿ ಮುಖ್ಯಮಂತ್ರಿ ಮತ್ತಿತರ ಮುಖಂಡರು ಇದ್ದಾರೆ


ರಾಜ್ಯದಲ್ಲಿ ೨೦೨೮ ಕ್ಕೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಕಲ್ಪ ತಮ್ಮದಾಗಿದೆ. ಹಾಗಾಗಿ ಅಧಿಕಾರ ಹಂಚಿಕೆಯ ಒಪ್ಪದದಂತೆ ತಮಗೂ ಅವಕಾಶ ಕೊಡಿ ಎಂದು ಡಿ.ಕೆ. ಶಿವಕುಮಾರ್ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರ ಬಳಿ ಮನವಿ ಪೂರ್ವಕ ಬೇಡಿಕೆ ಇಟ್ಟಿದ್ದಾರೆ ಎಂದು ಶಿವಕುಮಾರ್ ಅವರ ಆಪ್ತ ಮೂಲಗಳು ಹೇಳಿವೆ.


ವರಿಷ್ಠರ ಮಾತಿನಿಂದ ಶಿವಕುಮಾರ್ ಸಮಾಧಾನಗೊಂಡಿದ್ದು, ಆದಷ್ಟು ಬೇಗ ವರಿಷ್ಠರು ಸಹ ಒಂದು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.


ನಿನ್ನೆ ರಾತ್ರಿ ಖರ್ಗೆ-ವೇಣು ಭೇಟಿ


ದೆಹಲಿಯಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ತಡ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಇಟ್ಟಿದ್ದರಲ್ಲದೆ, ರಾಹುಲ್‌ಗಾಂಧಿ ಅವರ ಭೇಟಿಗೆ ಸಮಯ ನಿಗದಿ ಮಾಡುವಂತೆ ಕೋರಿದ್ದರು.
ಶಿವಕುಮಾರ್ ಜತೆ ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಸಹ ಖರ್ಗೆ ಭೇಟಿ ಸಂದರ್ಭದಲ್ಲಿ ಇದ್ದು, ಸುಮಾರು ಹೊತ್ತು ಈ ಇಬ್ಬರೂ ಖರ್ಗೆ ಹಾಗೂ ವೇಣುಗೋಪಾಲ್ ಜತೆ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.


ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಭೇಟಿ ಮಾತುಕತೆ ನಂತರ ಡಿ.ಕೆ. ಶಿವಕುಮಾರ್ ಇಂದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದು, ಹೈಕಮಾಂಡ್ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ವರಿಷ್ಠರಿಗೆ ಎಲ್ಲವನ್ನೂ ಹೇಳಿದ್ದೇನೆ: ಡಿಕೆಶಿ


ಪಕ್ಷದ ವರಿಷ್ಠರ ಜತೆ ಏನೇನು ಮಾತನಾಡಬೇಕೋ ಅದೆನ್ನೆಲ್ಲಾ ಮಾತನಾಡಿದ್ದೇನೆ. ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡಲು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ದೆಹಲಿಯ ಜನಪಥ್ ರಸ್ತೆಯಲ್ಲಿರುವ ಸೋನಿಯಾಗಾಂಧಿಯವರ ನಿವಾಸದಲ್ಲಿ ಇಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿನಾಯಕಿ ಪ್ರಿಯಾಂಕಾಗಾಂಧಿ ಜತೆ ಮಹತ್ವದ ರಾಜಕೀಯ ಚರ್ಚೆ ನಡೆಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ಅವರು, ವರಿಷ್ಠರಿಗೆ ಏನು ಹೇಳಬೇಕೋ ಅದೆನ್ನೆಲ್ಲಾ ಹೇಳಿದ್ದೇನೆ. ಎಲ್ಲ ರಾಜಕೀಯ ವಿದ್ಯಮಾನಗಳನ್ನು ತಿಳಿಸಿದ್ದೇನೆ ಎಂದರು.

ಅಸ್ಸಾಂನಲ್ಲಿ ಚುನಾವಣೆ ಇದೆ. ಅಲ್ಲ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ಬಗ್ಗೆ ಅಸ್ಸಾಂ ಕಾಂಗ್ರೆಸ್ ನಾಯಕರ ಜತೆ ಸೋನಿಯಾಗಾಂಧಿ ಅವರ ನಿವಾಸದಲ್ಲಿ ಎಲ್ಲರ ಜತೆ ಮಾತನಾಡಿದ್ದೇನೆ. ಯಾರ ಜತೆಗೆಲ್ಲಾ ಮಾತನಾಡಿ, ಏನು ಮಾತನಾಡಿದೆ ಎಂಬುದನ್ನು ಬೀದಿಯಲ್ಲಿ ನಿಂತು ಮಾತನಾಡುವ ಅಗತ್ಯ ಇಲ್ಲ ಎಂದರು.
ನಾನು ದೆಹಲಿಗೆ ಬಂದಿರುವುದೇ ರಾಜಕಾರಣ ಮಾಡುವುದಕ್ಕೆ ಹಾಗಾಗಿ ವರಿಷ್ಠರಿಗೆ ಏನೇನು ಹೇಳಬೇಕೋ ಎಲ್ಲವನ್ನು ಹೇಳಿದ್ದೇನೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಹೇಳಿ, ವರಿಷ್ಠರ ಜತೆಗೆನ ಮಾತುಕತೆಯ ಗುಟ್ಟನ್ನು ಬಿಟ್ಟು ಕೊಡಲಿಲ್ಲ.