Home ಮುಖಪುಟ ಸುದ್ದಿ ಸಿಎಂ ಪಟ್ಟಕ್ಕೆ ಡಿಕೆಶಿ ಪಟ್ಟು

ಸಿಎಂ ಪಟ್ಟಕ್ಕೆ ಡಿಕೆಶಿ ಪಟ್ಟು

ಬೆಂಗಳೂರು, ಮಾ. ೯- ಅಧಿಕಾರ ಹಂಚಿಕೆಯ ವಿಚಾರವನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿರುವ ತಮಗೂ ಒಂದು ಅವಕಾಶ ಕೊಡಬೇಕು ಎಂದು ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟು ಹಲವು ದಿನಗಳಿಂದ ಬೇಡಿಕೆ ಈಡೇರಿಕೆಗಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಬೀಡು ಬಿಟ್ಟು ತಮ್ಮ ಬೇಡಿಕೆ ಈಡೇರಿಕೆಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.


ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಶನಿವಾರ ಹೈಕಮಾಂಡ್ ಒಪ್ಪಿದರೆ ಮುಂದಿನ ಎರಡು ಬಜೆಟ್‌ಗಳನ್ನು ನಾನೇ ಮಂಡಿಸುತ್ತೇನೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಡಿ.ಕೆ. ಶಿವಕುಮಾರ್ ನಿನ್ನೆ ಕಲಬುರುಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಜತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅಲ್ಲಿಂದಲೇ ಖರ್ಗೆ ಅವರ ಜತೆ ದೆಹಲಿಗೆ ತೆರಳಿದ್ದರು.


ದೆಹಲಿಯಲ್ಲಿ ನಿನ್ನೆ ರಾತ್ರಿ ವರಿಷ್ಠರನ್ನು ಭೇಟಿ ಮಾಡಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದರಾದರೂ ಭೇಟಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದೂ ಸಹ ಅವರು ದೆಹಲಿಯಲ್ಲೇ ಉಳಿದಿದ್ದು, ಇಂದು ಪಕ್ಷದ ವರಿಷ್ಠರಾದ ರಾಹುಲ್‌ಗಾಂಧಿ, ಸೋನಿಯಾಗಾಂಧಿ, ಪ್ರಿಯಾಂಕಗಾಂಧಿ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡುವರು ಎಂದು ಹೇಳಲಾಗಿದೆ.


ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ಆರಂಭವಾಗಿ ೪-೫ ತಿಂಗಳು ಕಳೆದಿದ್ದರೂ ಹೈಕಮಾಂಡ್ ಮಾತ್ರ ಈ ಬಗ್ಗೆ ಯಾವುದೇ ತೀರ್ಮಾನ ಇದುವರೆಗೆ ಕೈಗೊಂಡಿಲ್ಲ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಶಾಸಕರ ಪರ-ವಿರುದ್ಧ ಹೇಳಿಕೆ ನೀಡುತ್ತಿದ್ದು ಬಣ ರಾಜಕೀಯ ಮೇಳೈಸಿದೆ.
ನಾಯಕತ್ವ ಬದಲಾವಣೆಗ ಸಂಬಂಧಿಸಿದಂತೆ ಶಾಸಕರುಗಳ ಸಚಿವರುಗಳು ಡಿನ್ನರ್ ಮೀಟಿಂಗ್ ಬಿರುಸಾಗಿವೆ. ಇಷ್ಟೆಲ್ಲಾ ಆದರೂ ಹೈಕಮಾಂಡ್ ಮಾತ್ರ ಯಾವ ತೀರ್ಮಾನ ಕೈಗೊಳ್ಳದೆ ಮೊಗಂ ಆಗಿದೆ.


ನಾಯಕತ್ವ ಬದಲಾವಣೆಗೇ ಸಂಬಂಧಿಸಿದಂತೆ ಯಾರೊಬ್ಬರೂ ಬಹಿರಂಗವಾಗಿ ಮಾತನಾಡಬಾರದು ಎಂದು ಹೈಕಮಾಂಡ್ ಈಗಾಗಲೇ ರಾಜ್ಯದ ಶಾಸಕರುಗಳಿಗೆ ಕಟ್ಟಪ್ಪಣೆ ವಿಧಿಸಿದ್ದೆಯಾದರೂ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಶಾಸಕರ ಪರ-ವಿರೋಧ ಹೇಳಿಕೆಗಳು ಮುಂದುವರೆದಿವೆ.
ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಆದಷ್ಟು ಬೇಗ ಒಂದು ತೀರ್ಮಾನ ಕೈಗೊಳ್ಳಬೇಕು ಎಂಬ ಒತ್ತಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ಶಾಸಕರು ವರಿಷ್ಠರನ್ನು ಒತ್ತಾಯಿಸಿದ್ದರು. ಜತೆಗೆ ಕೆಲ ಶಾಸಕರು, ಸಚಿವರು ದೆಹಲಿ ಯಾತ್ರೆಯನ್ನು ನಡೆಸಿ ಹೈಕಮಾಂಡ್‌ಗೆ ವಸ್ತು ಸ್ಥಿತಿಯನ್ನು ತಿಳಿಸುವ ಪ್ರಯತ್ನ ನಡೆಸಿದ್ದರು. ಇಷ್ಟೆಲ್ಲಾ ಆದರೂ ಹೈಕಮಾಂಡ್ ಮಾತ್ರ ಈ ವಿಚಾರದಲ್ಲಿ ಒಂದು ಸ್ಪಷ್ಟ ನಿರ್ಧಾರ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದೆ.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗಲು ಅವಕಾಶ ಮಾಡಿಕೊಡಿ, ಅವರು ಪಕ್ಷಕ್ಕೆ ದುಡಿದಿದ್ದಾರೆ ಎಂಬ ಬೇಡಿಕೆ ಇಟ್ಟಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ. ಹೈಕಮಾಂಡ್ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇನೆ ಎಂದು ಹೇಳುವ ಮೂಲಕ ಸ್ಪಷ್ಟಪಡಿಸಿದ್ದಾರೆ.


ಈ ಎಲ್ಲದರ ನಡುವೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಲವು ಬಾರಿ ದೆಹಲಿ ಯಾತ್ರೆ ನಡೆಸಿದ್ದರು. ಈಗ ಮತ್ತೆ ಅವರು ದೆಹಲಿಯಲ್ಲೇ ಮೊಕ್ಕಾಂ ಹೂಡಿ ಅಧಿಕಾರ ಹಂಚಿಕೆಯ ವಿಚಾರವನ್ನು ಇತ್ಯರ್ಥ ಪಡಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.


ಇಂದು ವರಿಷ್ಠರನ್ನು ಭೇಟಿ ಮಾಡುವ ಅವರು, ನಾಳೆ ಬೆಂಗಳೂರಿಗೆ ವಾಪಸ್ಸಾಗಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಹವಾಲಿಗೆ ಹೈಕಮಾಂಡ್ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.