Home ಜಿಲ್ಲೆ ಉಗ್ರಪ್ಪ ಹೇಳಿಕೆಗೆ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷರ ಖಂಡನೆ

ಉಗ್ರಪ್ಪ ಹೇಳಿಕೆಗೆ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷರ ಖಂಡನೆ

ಬೀದರ:ಮಾ.೯: ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಭೋವಿ ವಡ್ಡರ ಸಮಾಜದ ಬಗ್ಗೆ ನೀಡಿರುವ ಹೇಳಿಕೆಗೆ ಭೋವಿ ವಡ್ಡರ ಸಮಾಜದ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭೋವಿ ವಡ್ಡರ ಸಮಾಜವು ಇತಿಹಾಸಾತ್ಮಕವಾಗಿ ಪರಿಶಿಷ್ಟ ಜಾತಿಗೆ ಸೇರಿರುವ ಸಮುದಾಯವಾಗಿದ್ದು, ಇದರ ಕುರಿತು ಸಾಕಷ್ಟು ದಾಖಲೆಗಳಿವೆ ಎಂದು ಸಮಾಜದ ನಾಯಕರು ತಿಳಿಸಿದ್ದಾರೆ. ಮೈಸೂರು ಸಂಸ್ಥಾನದ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ವಡೆಯರ್ ಅವರು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ವಿವಿಧ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಂಡಿದ್ದರು. ಅದೇ ರೀತಿ ಶಾಹು ಮಹಾರಾಜರನ್ನು ದೇಶದಲ್ಲಿ ಮೀಸಲಾತಿಯ ಪ್ರವರ್ತಕರಾಗಿ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಭೋವಿ ವಡ್ಡರ ಸಮಾಜದವರು ಕೆ.ಆರ್.ಎಸ್. ಅಣೆಕಟ್ಟು ನಿರ್ಮಾಣ ಸೇರಿದಂತೆ ಹಲವಾರು ಪ್ರಮುಖ ಕಾಮಗಾರಿಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ತಿಳಿಸಲಾಗಿದೆ. ನಂತರ ಸಂವಿಧಾನ ಜಾರಿಯಾದಾಗ ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನದ ಮೂಲಕ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ಮುಂದುವರೆಸಲಾಗಿದೆ ಎಂದು ಸಮಾಜದ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರ ಆಡಳಿತಾವಧಿಯಲ್ಲಿ ೨೭-೦೭-೧೯೭೭ರ ಅಧಿಸೂಚನೆಯ ಮೂಲಕ ಭೋವಿ, ಓಡವಡ್ಡೆ, ವಡ್ಡರ ಮುಂತಾದ ಸಮಾನಾರ್ಥಕ ಪದಗಳನ್ನು ಒಳಗೊಂಡAತೆ ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಉಗ್ರಪ್ಪ ಅವರು ಇತಿಹಾಸ ಮತ್ತು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಭೋವಿ ಸಮುದಾಯದ ಕುರಿತು ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಹೇಳಿಕೆಗೆ ಉಗ್ರಪ್ಪ ಅವರು ಕ್ಷಮೆ ಕೋರಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಜಿಲ್ಲಾ ಭೋವಿ ವಡ್ಡರ ಸಮಾಜದ ಜಿಲ್ಲಾ ಅಧ್ಯಕ್ಷ ಸಂತೋಷ ಏಣಕೂರ ಅವರು, ಸಮುದಾಯದ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.