
ಕಲಬುರಗಿ,ಸೆ.3: ಕಳೆದ ಆಗಷ್ಟ ಮಾಹೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಬೆಳೆ ಹಾನಿಗೊಳಗಾದ ಕಲಬುರಗಿ, ಶಹಾಬಾದ ಮತ್ತು ಚಿತ್ತಾಪೂರ ತಾಲ್ಲೂಕಿಗೆ ಮಂಗಳವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಭೇಟಿ ನೀಡಿ ಬೆಳೆ ಮತ್ತು ಮಳೆ ಹಾನಿ ಪ್ರದೇಶ ವೀಕ್ಷಿಸಿದರು.
ಅತಿವೃಷ್ಠಿಯಿಂದಾಗಿ ಹಾನಿಯಾದ ಕಲಬುರಗಿ ತಾಲ್ಲೂಕಿನ ನಂದೂರ (ಬಿ) ಗ್ರಾಮದ ನಿತೀಶ್ ಶರಣಗೌಡ ರವರ ಸರ್ವೆ ನಂಬರ್ 141/1 ರಲ್ಲಿನ ತೊಗರಿ ಬೆಳೆ, ಚಿತ್ತಾಪೂರ ತಾಲ್ಲೂಕಿನ ವಾಡಿ ಗ್ರಾಮದ ವಿಠಲ ಯಮುನು ರಾಠೋಡ ರವರ ಸರ್ವೆ ನಂಬರ್ 42 ರಲ್ಲಿ ಹೆಸರು ಬೆಳೆ, ಹಲಕಟ್ಟಿ ಗ್ರಾಮದ ಶೇಷಮ್ಮ ನಿಂಗಣ್ಣ ಅವರ ಸರ್ವೆ ನಂಬರ್ 158//1 ರಲ್ಲಿ ಹತ್ತಿ ಬೆಳೆ ಹಾಗೂ ರತ್ನಮ್ಮ ಸಿದ್ದಣ್ಣ ಅವರ ಸರ್ವೆ ನಂಬರ್ 158//2 ರಲ್ಲಿ ತೊಗರಿ ಬೆಳೆ ಪರಿಶೀಲಿಸಿದರು.
ಇದಲ್ಲದೆ ಶಹಾಬಾದ ತಾಲ್ಲೂಕಿನ ರಾವೂರ ಗ್ರಾಮದ ಗುರುನಾಥ ಮಾಣಿಕಪ್ಪ ಅವರು ಸರ್ವೆ ನಂಬರ್ 16/1 ರಲ್ಲಿ ಬಿತ್ತಲಾದ ಉದ್ದು ಬೆಳೆ, ದೇವಿಂದ್ರ ಧರ್ಮಣ್ಣ ಅವರ ಸರ್ವೆ ನಂಬರ್ 17 ರಲ್ಲಿ ಬೆಳೆಯಲಾದ ತೊಗರಿ ಬೆಳೆ, ಹೀರಾಬಾಯಿ ರಾಮಚಂದ್ರ ರವರ ಸರ್ವೆ ನಂಬರ್ 185 ರಲ್ಲಿನ ತೊಗರಿ ಬೆಳೆ ಹಾಗೂ ಮಾಲಗತ್ತಿ ಗ್ರಾಮದ ಸುಂದರ ಮನೋಹರ ಅವರು ಸರ್ವೆ ನಂಬರ್ 25/1 ರಲ್ಲಿ ಮತ್ತು ಶರಣಪ್ಪ ಕೇಶಪ್ಪ ಅವರು ಸರ್ವೆ ನಂಬರ್ 25/2 ರಲ್ಲಿನ ತೊಗರಿ ಬೆಳೆಹಾನಿ ವೀಕ್ಷಿಸಿ ರೈತರ ಅಹವಾಲು ಆಲಿಸಿದರು.
ಶಹಬಾದ ಪಟ್ಟಣದ ಜೇವರ್ಗಿ ರಸ್ತೆಯಲ್ಲಿರುವ ನೀರು ಶುದ್ಧಿಕರಣ ಘಟಕಕ್ಕೂ ಡಿ.ಸಿ. ಅವರು ಭೇಟಿ ನೀಡಿ, ನಗರ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕು. ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕೆಂದ ಅವರು, ಪಟ್ಟಣದ ಹಳೇ ಶಹಾಬಾದ ಪ್ರದೇಶಕ್ಕೂ ಭೇಟಿ ನೀಡಿದ ಅವರು, ಮಳೆಯಿಂದಾಗುವ ಸಮಸ್ಯೆಗಳ ಕುರಿತು ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು.
ಚಿತ್ತಾಪೂರ ಹಾಗೂ ಶಹಾಬಾದ ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ತೊಗರಿ, ಹತ್ತಿ, ಹೆಸರು, ಉದ್ದು ಹಾಗೂ ಇತರೆ ಬೆಳೆಗಳು ಹಾನಿಯಾಗಿದ್ದರಿಂದ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಗ್ರಾಮವಾರು ಬೆಳೆ ಹಾನಿಯ ಸ್ಫಷ್ಟ ವರದಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಮೀಕ್ಷೆಯಿಂದ ಯಾವುದೇ ಅರ್ಹ ರೈತ ಬಿಟ್ಟುಹೋಗದಂತೆ ಎಚ್ಚರಿಕೆ ವಹಿಸಬೇಕೆಂದರು.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಚಿತ್ತಾಪುರ ತಹಶೀಲ್ದಾರ ನಾಗಯ್ಯ ಹಿರೇಮಠ, ಶಹಾಬಾದ ತಹಶೀಲ್ದಾರ ನೀಲಪ್ರಭಾ, ನಗರಸಭೆ ಆಯುಕ್ತ ಕೆ.ಗುರುಲಿಂಗಪ್ಪ ಸೇರಿದಂತೆ ಕೃಷಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಇತರೆ ಅಧಿಕಾರಿಗಳು ಇದ್ದರು.