Home ಜಿಲ್ಲೆ ಕಾಲುವೆ ಜಾಲದ ಮೂಲಕ ಸಮರ್ಪಕ ನೀರು ಹರಿಸಿ: ರೈತರ ಮನವಿ

ಕಾಲುವೆ ಜಾಲದ ಮೂಲಕ ಸಮರ್ಪಕ ನೀರು ಹರಿಸಿ: ರೈತರ ಮನವಿ

ಸಂಜೆವಾಣಿ ವಾರ್ತೆ,
ವಿಜಯಪುರ, ಎ. ೫:ಕಾಲುವೆ ಜಾಲದ ಮೂಲಕ ರೈತರ ಹೊಲಗಳಿಗೆ ನೀರು ಹರಿಸುವ ಮೂಲಕ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಮೂಲಕ ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಸಕಾಲಕ್ಕೆ ಕ್ಲೋಜರ್ ಕಾಮಗಾರಿ ನಡೆಸಿ ಕಾಲುವೆ ಕೊನೆ ಭಾಗದ ರೈತರಿಗೆ ನೀರು ತಲುಪುವಂತೆ ಕ್ರಮಕೈಗೊಳ್ಳಲು ಒತ್ತಾಯಿಸಿದರು.
ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಲ್ಲಿ ತುಂಬಿಕೊAಡಿರುವ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸುವ ಕ್ಲೋಸರ್ ಕಾಮಗಾರಿಯನ್ನು ಸಕಾಲಕ್ಕೆ ಪ್ರಾರಂಭಿಸಿ ಸರಾಗವಾಗಿ ಕಾಲುವೆ ಜಾಲಕ್ಕೆ ನೀರು ಹರಿಸಿದಾಗ ಕಾಲುವೆ ಕೊನ ಅಂಚಿನವರೆಗೂ ನೀರು ತಲುಪುವಂತೆ ನೋಡಿಕೊಳ್ಳಬೇಕು. ಪ್ರತಿ ವರ್ಷ ಕ್ಲೋಸರ್ ಕಾಮಗಾರಿ ಸರಿಯಾಗಿ ಆಗುತ್ತಿಲ್ಲ. ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸುವ ಮುನ್ನವೇ ಟೆಂಡರ್ ಕರೆದು ಎಲ್ಲ ಸಿದ್ಧತೆಗಳನ್ನು ಮೊದಲೆ ತಯಾರಿ ಮಾಡಿಕೊಂಡಿರಬೇಕು. ಒಡೆದ ಕಾಲುವೆಗಳ ದುರಸ್ತಿ, ಕಾಲುವೆಗಳಲ್ಲಿ ತುಂಬಿದ ಹೂಳು, ಮುಳ್ಳು ಕಂಟಿಗಳ ತೆರವುಗೊಳಿಸುವುದು ಸೇರಿದಂತೆ ಕ್ಲೋಸರ್ ಕಾಮಗಾರಿಯಡಿ ನಡೆಯುತ್ತವೆ. ಹಲವಾರು ವರ್ಷಗಳಿಂದ ಅನುದಾನ ಕೊರತೆಯಿಂದ ಕ್ಲೋಸರ್ ಕಾಮಗಾರಿಗೆ ಗ್ರಹಣ ಆವರಿಸಿತ್ತು. ಕಳೆದ ವರ್ಷ ಕೆಲವು ಕಡೆ ಕಾಮಗಾರಿ ಮಾಡಿದ್ದರು. ಆದರೆ ಅದು ಕೂಡ ಸರಿಯಾದ ರೀತಿಯಲ್ಲಿ ಆಗಲಿಲ್ಲ. ಆಲಮಟ್ಟಿ ಎಡದಂಡೆ ಕಾಲುವೆಯ ೫ನೇ ವಿತರಣಾ ಕಾಲುವೆಯ ೨ನೇ ಮತ್ತು ೩ನೇ ಲ್ಯಾಟರಲ್ ಗಳನ್ನು ನಿರ್ಮಿಸಿದ ನಂತರ ಇಲ್ಲಿಯವರೆಗೂ ದುರಸ್ತಿ ಕೆಲಸ ಮಾಡಿಲ್ಲ. ಇದರಿಂದ ಅಂದಾಜು ಸಾವಿರಾರು ರೈತರ ಜಮೀನುಗಳಿಗೆ ಸಕಾಲಕ್ಕೆ ನೀರು ದೊರೆತಿಲ್ಲ. ಇದನ್ನು ಆ ಭಾಗದ ರೈತರು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಕ್ರಮ ಕೈಗೊಂಡಿಲ್ಲ.
ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯ ಇರುವ ಜಲಾಶಯ ಪ್ರತಿ ವರ್ಷ ಭರ್ತಿಯಾದರೂ ಕೂಡ ಜಿಲ್ಲೆಯ ರೈತರಿಗೆ ಕೇಳಿದ ಸಂದರ್ಭದಲ್ಲಿ ನೀರು ಕೊಡಲಾಗುತ್ತಿಲ್ಲ. ಜಿಲ್ಲೆಯಲ್ಲಿ ೨.೩೦ ಲಕ್ಷ ಹೆಕ್ಟರ್ ಪ್ರದೇಶ ನೀರಾವರಿಗೆ ಒಳಪಟ್ಟಿದ್ದರೂ ಕೂಡ ಕಾಲುವೆ ಜಾಲದ ರೈತರ ಗೋಳು ತಪ್ಪಿಲ್ಲ. ನಾನಾ ಕಾಲುವೆಗಳ ಬಹುತೇಕ ವಿತರಣಾ ಕಾಲುವೆಗಳಲ್ಲಿ ಅಪಾರ ಪ್ರಮಾಣದ ಹೂಳು, ಮುಳ್ಳು-ಕಂಟಿಗಳು ಬೆಳೆದಿವೆ. ನೀರು ಮುಂದೆ ಸಾಗದೆ ಇರುವುದರಿಂದ ಅಲ್ಲೇ ಶೇಖರಣೆಗೊಂಡು ರೈತರ ಜಮೀನುಗಳಿಗೆ ನುಗ್ಗಿ ಬಿತ್ತನೆ ಮಾಡಿದ ಎಲ್ಲ ಬೆಳೆಗಳು ನೀರಿನಲ್ಲಿ ಕೊಳೆತು ಹೋಗಿ ಸಾಕಷ್ಟು ಪ್ರಮಾಣ ಹಾನಿಯಾದ ಉದಾಹರಣೆಗಳಿವೆ. ಸಾಕಷ್ಟು ಹೂಳು ತುಂಬಿಕೊAಡಿದೆ. ಹೀಗಾಗಿ ಕಾಲುವೆಗಳ ಕೊನೆಯಂಚಿನ ಜಮೀನುಗಳಿಗೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಕಾಲುವೆ ನಿರ್ಮಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಕಾಲುವೆ ಅಕ್ಕಪಕ್ಕದ ರಸ್ತೆಗಳು ಮುಳ್ಳುಕಂಟಿಗಳಿAದ ಆವರಿಸಿದ್ದರಿಂದ ರೈತರು ಜಮೀನುಗಳಿಗೆ ಹೋಗಲು ಕೂಡ ಪರದಾಡುವಂತಾಗಿದೆ. ಇದು ಪ್ರತಿ ವರ್ಷ ರೈತರಿಗೆ ದೊಡ್ಡ ಸವಾಲಾಗಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ ತಕ್ಷಣ ಕ್ಲೋಸರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆದರೆ ಅಧಿಕಾರಿಗಳು ತಡವಾಗಿ ಟೆಂಡರ್ ಕರೆದು ನೀರು ಹರಿಸುವ ಸಮಯದಲ್ಲಿ ಕಾಮಗಾರಿ ಆರಂಭಿಸುತ್ತಾರೆ. ಇದರಿಂದ ಉದ್ದೇಶಿತ ಕ್ಲೋಸರ್ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಇದರಿಂದ ಕೋಟ್ಯಂತರ ಹಣ ಅನಾವಶ್ಯಕವಾಗಿ ಹಾಳಾಗಿ ಹೋಗುತ್ತಿವೆ. ಆದ ಕಾರಣ ಈ ಬಾರಿ ಕಾಲುವೆಗಳಿಗೆ ನೀರು ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿದ ತಕ್ಷಣ ಕಾಮಗಾರಿ ಪ್ರಾರಂಭಿಸಿ ಕಾಲುವೆ ಕೊನೆ ಅಂಚಿನವರೆಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬಸವನ ಬಾಗೇವಾಡಿ ತಾಲೂಕಾಧ್ಯಕ್ಷ ಉಮೇಶ ವಾಲೀಕಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಬಸವನ ಬಾಗೇವಾಡಿ ತಾಲೂಕಾ ಉಪಾಧ್ಯಕ್ಷ ಹೊನಕೇರೆಪ್ಪ ತೆಲಗಿ, ಸೋಮೇಶ ನಾಗರೆಡ್ಡಿ, ಮಲ್ಲನಗೌಡ ಮೇಟಿ, ಮಾಳಪ್ಪ ಪೂಜಾರಿ, ಲಂಕೇಶ ತಳವಾರ, ಸಂಗು ಚಲವಾದಿ, ಸಿದ್ದು ಹಿರೇಮಠ, ಮಲ್ಲಿಕಾರ್ಜುನ ಭಜಂತ್ರಿ, ಮಡಿವಾಳಪ್ಪ ನಾಗರೆಡ್ಡಿ, ಶ್ರೀಶೈಲ ಕುರಣದ, ವಿಠ್ಠಲ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.