
ಬೆಂಗಳೂರು, ಜ. ೨೩- ವಿಧಾನಮಂಡಲದ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲರಿಗೆ ಅಗೌರವ ತೋರಲಾಗಿದೆ ಎಂಬ ಪ್ರತಿಪಕ್ಷಗಳ ದೂರು ಹಾಗೂ ರಾಜ್ಯಪಾಲರು ಸಂವಿಧಾನ ಉಲ್ಲಂಘಿಸಿದ್ದಾರೆ. ರಾಷ್ಟ್ರಗೀತೆಗೆ ಅಗೌರವ ನೀಡಿದ್ದಾರೆ ಎಂಬ ಆಡಳಿತ ಪಕ್ಷದ ಅಹವಾಲು ಎಲ್ಲವನ್ನು ಗಣನೆಗೆ ತೆಗೆದುಕೊಂಡು ರೂಲಿಂಗ್‌ನ್ನು ಮುಂದೆ ನೀಡುವುದಾಗಿ ಸಭಾಧ್ಯಕ್ಷ ಯು.ಟಿ. ಖಾದರ್ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.
ಇಂದು ಬೆಳಗ್ಗೆ ಸದನ ಆರಂಭವಾದಾಗಿನಿಂದಲೇ ಪ್ರತಿಪಕ್ಷವಾದ ಬಿಜೆಪಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಬಂದ ರಾಜ್ಯಪಾಲರಿಗೆ ಆಡಳಿತ ಪಕ್ಷದ ಸದಸ್ಯರು ಅವಮಾನ ಮಾಡಿದ್ದಾರೆ. ಅವರಿಗೆ ಅಗೌರವ ತೋರಲಾಗಿದೆ. ರಾಜ್ಯಪಾಲರಿಗೆ ಅಗೌರವ ತೋರಿರುವ ಸದಸ್ಯರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ, ಸದನ ನಿಯಮಾವಳಿಗಳನ್ನೆಲ್ಲಾ ಉಲ್ಲೇಖಿಸಿ ಸುದೀರ್ಘವಾಗಿ ಮಾತನಾಡಿದರು.
ಇದಕ್ಕೆ ಪ್ರತಿಯಾಗಿ ಸಚಿವ ಹೆಚ್.ಕೆ. ಪಾಟೀಲ್ ಸಹ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಯಾವ ರೀತಿ ಸಂವಿಧಾನ ಉಲ್ಲಂಘಿಸಿದ್ದಾರೆ. ಸಂವಿಧಾನಕ್ಕೆ ಅನುಗುಣವಾಗಿ ಅವರು ನಡೆದುಕೊಂಡಿಲ್ಲ. ರಾಷ್ಟ್ರಗೀತೆಗೆ ಅವಮಾನ ತೋರಿದ್ದಾರೆ. ಎಲ್ಲವನ್ನು ಎಳೆ ಎಳೆಯಾಗಿ ಬಿಡಿಸಿಟ್ಟು, ರಾಜ್ಯಪಾಲರಿಗೆ ಯಾವುದೇ ರೀತಿಯಲ್ಲೂ ಅಗೌರವ ತೋರಿಲ್ಲ. ಅವರೇ ರಾಷ್ಟ್ರಗೀತೆಗೆ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿ, ಸಂವಿಧಾನದ ಉಲ್ಲಂಘನೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ರೂಲಿಂಗ್ ನೀಡುವಂತೆ ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಇದಕ್ಕ ಪ್ರತಿಪಕ್ಷಗಳ ಹಾಗೂ ಆಡಳಿತ ಪಕ್ಷದ ಎರಡೂ ಕಡೆಯ ವಾದ-ಪ್ರತಿವಾದ, ಆರೋಪ-ಪ್ರತ್ಯೋರಾಪ ಎಲ್ಲವನ್ನು ಗಮನಿಸಿದ್ದೇನೆ. ತಕ್ಷಣಕ್ಕೆ ಈ ಬಗ್ಗೆ ರೂಲಿಂಗ್ ಕೊಡಲು ಆಗಲ್ಲ. ಎಲ್ಲವನ್ನು ಚರ್ಚಿಸಿ ಈ ಅಧಿವೇಶನದಲ್ಲೇ ರೂಲಿಂಗ್ ನೀಡುತ್ತೇನೆ ಎಂದು ಹೇಳಿದರು.
ಬೆಳಗ್ಗೆಯಿಂದ ರಾಜ್ಯಪಾಲರಿಗೆ ಅಗೌರವ ತೋರಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂಬ ಆಡಳಿತ ಪಕ್ಷದ ತಕರಾರಿನ ಬಗ್ಗೆ ಬೆಳಗ್ಗೆಯಿಂಲೇ ಸದನದಲ್ಲಿ ನಡೆದಿದ್ದ ಸುದೀರ್ಘ ಚರ್ಚೆ, ಮಾತಿನ ಚಕಮಕಿ ವಾಗ್ಯುದ್ಧಗಳಿಗೆ ತೆರೆ ಎಳೆದರು.






























