
ಬೆಂಗಳೂರು, ಫೆ. ೪- ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ದಲಿತ ಸಚಿವರು ಹಾಗೂ ಶಾಸಕರುಗಳು ನಿನ್ನೆ ಡಿನ್ನರ್ ಮೀಟಿಂಗ್ ನಡೆಸಿರುವುದು ದಲಿತ ಸಿಎಂ ಕೂಗಿಗೆ ಮತ್ತಷ್ಟು ಬಲ ತುಂಬಿದಂತಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾದರೆ ದಲಿತರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಮುನ್ನಲೆಗೆ ಬಂದಿತ್ತು. ಹಲವು ನಾಯಕರು ದಲಿತ ಸಿಎಂ ಪರವಾಗಿ ಧ್ವನಿ ಎತ್ತಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಎಲ್ಲವೂ ನೇಪಥ್ಯಕ್ಕೆ ಸರಿದಂತಾಗಿತ್ತು.
ಈಗ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ದಲಿತ ಸಚಿವರು ಹಾಗೂ ಶಾಸಕರುಗಳು ಡಿನ್ನರ್ ಮೀಟಿಂಗ್ ನಡೆಸಿರುವುದು ದಲಿತ ಸಿಎಂ ಕೂಗು ಮತ್ತೆ ಮುನ್ನಲೆಗೆ ಬಂದಂತಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ದಲಿತ ಸಚಿವರು ಹಾಗೂ ಶಾಸಕರುಗಳ ಡಿನ್ನರ್ ಮೀಟಿಂಗ್‌ನಲ್ಲಿ ದಲಿತ ಸಿಎಂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಲಾಗಿದೆ.
ದಲಿತ ಸಚಿವರು ಹಾಗೂ ಶಾಸಕರ ಡಿನ್ನರ್ ಮೀಟಿಂಗ್‌ನಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಪಂಗಡದ ವಿಧಾನಸಭಾ ಸದಸ್ಯರು ಹಾಗೂ ವಿಧಾನಪರಿಷತ್‌ನ ಸದಸ್ಯರು ಭಾಗಿಯಾಗಿದ್ದು, ಸುಮಾರು ೩೦ ಕ್ಕೂ ಹೆಚ್ಚು ದಲಿತ ಶಾಸಕರುಗಳು ಡಿನ್ನರ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
ಸಚಿವರಾದ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಈ ಡಿನ್ನರ್ ಮೀಟಿಂಗ್ ನಡೆದಿದ್ದು, ಸಚಿವರುಗಳಾದ ಕೆ.ಹೆಚ್. ಮುನಿಯಪ್ಪ, ಡಾ.ಹೆಚ್..ಸಿ. ಮಹದೇವಪ್ಪ್ಪ, ಶಿವರಾಜ್ ತಂಗಡಗಿ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಹಲವು ದಲಿತ ಸಚಿವರುಗಳು ಈ ಡಿನ್ನರ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು.
ಶಾಸಕರುಗಳಾದ ನರೇಂದ್ರಸ್ವಾಮಿ, ಬಂಗಾರಪೇಟೆ ನಾರಾಯಣಸ್ವಾಮಿ, ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಪಾವಗಡ ವೆಂಕಟೇಶ್ ಸೇರಿದಂತೆ ಹಲವು ದಲಿತ ಶಾಸಕರುಗಳು ಈ ಔತಣ ಕೂಟದಲ್ಲಿ ಭಾಗಿಯಾಗಿದ್ದರು.
ಈ ಹಿಂದೆ ಸಹ ಹಲವು ಬಾರಿ ದಲಿತ ಸಚಿವರುಗಳು ಉಪಹಾರ ಸಭೆಗಳನ್ನು ನಡೆಸಿದ್ದರು. ಇದೇ ಮೊದಲ ಬಾರಿಗೆ ದಲಿತ ಶಾಸಕರುಗಳ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಹಾಗೆಯೇ ನಾನಾ ವ್ಯಾಖ್ಯಾನಗಳಿಗೂ ಕಾರಣವಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ತೀರ್ಮಾನಕ್ಕೆ ಹೈಕಮಾಂಡ್ ಮುಂದಾದರೆ ದಲಿತ ಸಿಎಂ ಬೇಡಿಕೆಯನ್ನು ಮುಂದಿಡಲು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
























