
ಬೆಂಗಳೂರು,ಸೆ.೫-ದಿನೇ ದಿನೇ ಹತ್ತು ಹಲವು ತಿರುವು ಪಡೆಯುತ್ತಿರುವ ಧರ್ಮಸ್ಥಳ ಪ್ರಕರಣ ಇದೀಗ ಮಹಿಳಾ ಸಂಘಟನೆಗಳ ಮೂಲಕ ಈಗ ಸೋನಿಯಾ ಗಾಂಧಿ ಅವರಿಗೆ ತಲುಪಿದೆ.
ಮಹಿಳಾ ಸಂಘಟನೆಗಳು ಪತ್ರ ಮುಖೇನ ಸೋನಿಯಾ ಗಾಂಧಿಗೆ ವಿಸ್ತೃತ ಮಾಹಿತಿ ನೀಡಿವೆ.
ಯಾರು ಕೊಂದರು ಎಂಬ ಶೀರ್ಷಿಕೆಯಡಿಯಲ್ಲಿ ಸೋನಿಯಾ ಗಾಂಧಿಗೆ ಪತ್ರ ಬರೆಯಲಾಗಿದೆ.
ರಾಜ್ಯದ ೧೦ ಮಹಿಳಾ ಸಂಘಟನೆಗಳು ಮತ್ತು ೪೦ ಮಹಿಳಾ ಕಾರ್ಯಕರ್ತರು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿಗೆ ಪತ್ರ ಬರೆದು ಎಸ್‌ಐಟಿ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಆರೋಪಿ ಚಿನ್ನಯ್ಯ ಬಂಧನ, ಸುಜಾತಾ ಭಟ್ ಪ್ರಕರಣ ಮತ್ತು ಮಾಧ್ಯಮ ವರದಿಗಳನ್ನು ಉಲ್ಲೇಖಿಸಲಾಗಿದೆ.
ಕಾರ್ಯಕರ್ತರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸಹ ಉಲ್ಲೇಖಿಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಪಿತೂರಿ ನಡೆದಿದೆ ಇದರಲ್ಲಿ ಹುರುಳಿಲ್ಲ ಎಂದು ಡಿ.ಕೆ. ಶಿವಕುಮಾರ್ ತಪ್ಪುದಾರಿಗೆಳೆಯುವ ಹೇಳಿಕೆ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಸಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ವಿರೋಧ ಪಕ್ಷದ ಒತ್ತಡಕ್ಕೆ ಮಣಿದು ಧರ್ಮಸ್ಥಳದ ಕುರಿತು ವರದಿ ಮಾಡುವ ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ, ಕಾರ್ಯಕರ್ತರು ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ವಿ.ಎಸ್. ಉಗ್ರಪ್ಪ ಸಮಿತಿ ೨೦೧೮ ರಲ್ಲಿ ಸಲ್ಲಿಸಿದ ವರದಿಯನ್ನು ಪರಿಗಣಿಸಬೇಕು.
ಸಾರ್ವಜನಿಕ ಪ್ರತಿನಿಧಿಗಳು ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು.
ಸೌಜನ್ಯ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಅಧಿಕಾರಿಗಳನ್ನು ನ್ಯಾಯಾಲಯದ ಆದೇಶದಂತೆ ತನಿಖೆ ನಡೆಸಬೇಕೆಂದು ವಿನಂತಿಸಲಾಗಿದೆ.