ಕೇಂದ್ರೀಯ ವಿವಿಯಲ್ಲಿ ಜೈನ ಧರ್ಮದ ಅಧ್ಯಯನ ಪೀಠ ಸ್ಥಾಪಿಸಲು ಒತ್ತಾಯ

ಕಲಬುರಗಿ,ಡಿ.20-ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜೈನ ಧರ್ಮದ ಪವಿತ್ರ ಕ್ಷೇತ್ರವಾದ ಶ್ರವಣಬೆಳಗೋಳದ ತ್ರಿಕಾಲ ವಂದಿಪರಾದ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಅವರ ಹೆಸರಿನಲ್ಲಿ ಜೈನಧರ್ಮದ ಅಧ್ಯಯನ ಪೀಠ ಸ್ಥಾಪಿಸುವಂತೆ ಕೋರಿ ಕೇಂದ್ರ ಮಾಜಿ ಸಚಿವರಾದ ಭಗವಂತ ಖೂಬಾ ರವರ ನೇತೃತ್ವದಲ್ಲಿ ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ ರವರಿಗೆ ನಿಯೋಗೊಂದಿಗೆ ನವದೆಹಲಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು.
ಪೂರ್ವದಿಂದಲೂ ಮಾನವ ಜನಾಂಗದ ಅಭ್ಯುದಯಕ್ಕಾಗಿ ಮೌಲ್ಯಾಧರಿತವಾದ ನೀತಿಗಳನ್ನು ತಿಳಿಸಿ ಶಾಂತಿ, ತ್ಯಾಗ, ಅಹಿಂಸೆ ತತ್ವಗಳನ್ನು ಬೋಧಿಸಿದ ಜೈನ ಧರ್ಮ ಕನ್ನಡ ನಾಡಿನ ಚರಿತ್ರೆ ಮತ್ತು ಪ್ರಾಚೀನತೆಯನ್ನು ಹೊಂದಿರುವಂತಹದ್ದು. ರಾಷ್ಟ್ರಕೂಟರ ರಾಜಧಾನಿಯಾದ ಮಾನ್ಯಖೇಟ (ಮಳಖೇಡ) ನೆಲದಿಂದ ಕನ್ನಡದ ಮೊಟ್ಟಮೊದಲ ಗ್ರಂಥ ಶ್ರೀ ವಿಜಯನ ಕವಿರಾಜಮಾರ್ಗದ ನೆಲವಿದ್ದು ಕಲಬುರಗಿ ಸೇರಿದಂತೆ ಕಲ್ಯಾಣ
ಕರ್ನಾಟಕದಲ್ಲಿ ಜೈನ ಧರ್ಮದ ಗತಃಕಾಲದ ವೈಭವ ಸಾರುವ ಪ್ರಾಚೀನ ಶಿಲಾಶಾಸನಗಳು, ಬಸದಿಗಳು ಇಂದಿಗೂ ನಾವು ಕಾಣಬಹುದು. ಈ ದಿಶೆಯಲ್ಲಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜೈನ ಧರ್ಮದ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ಕಾಲದ ಗರ್ಭದಡಿ ಮರೆಯಾಗಿ ಹೋಗುತ್ತಿರುವ ಭವ್ಯ ಸಂಸ್ಕøತಿ ಸಾರುತ್ತಿರುವ ಸಂಪದ್ಭರಿತವಾದ ವಿಚಾರಧಾರೆಯನ್ನು ಹೊಂದಿರುವ ಜೈನ ಧರ್ಮದ ಕುರಿತು ಅಧ್ಯಯನದ ಅಗತ್ಯವಿರುವುದರಿಂದ ತಾವುಗಳು ಅಧ್ಯಯನ ಪೀಠ ಸ್ಥಾಪಿಸುವಂತೆ ಕೋರಿಕೊಂಡಾಗ ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಿಯೋಗದಲ್ಲಿ ಕಲಬುರಗಿ ಜಿಲ್ಲಾ ಜೈನ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ ಎಸ್. ತಂಗಾ, ಕಾರ್ಯದರ್ಶಿಯಾದ ಧರಣೇಂದ್ರ ಸಂಗಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.