ತಳವಾರ ಸಮುದಾಯದ ಬೇಡಿಕೆ ಈಡೇರಿಕೆಗೆ ಒತ್ತಾಯ : 16ರಂದು ಸಿಎಂಗೆ ಕಪ್ಪು ಬಾವುಟ ಪ್ರದರ್ಶನ

ಕಲಬುರಗಿ:ಸೆ.4: ತಳವಾರ ಸಮುದಾಯವನ್ನು ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡ (Sಖಿ) ಪಟ್ಟಿಗೆ ಸೇರಿಸಿ ಪ್ರಮಾಣ ಪತ್ರ ನೀಡಿರುತ್ತಾರೆ, ಈಗ ಅಧಿಕಾರದಲ್ಲಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಅನಾವಶ್ಯಕ ಗೊಂದಲಗಳನ್ನು ಸೃಷ್ಟಿ ಮಾಡಿ ಎಸ್ ಟಿ ಸೌಲಭ್ಯದಿಂದ ವಂಚಿಸುವ ಉನ್ನಾರ ನಡೆದಿರುವುದು ಅತ್ಯಂತ ತೀವ್ರವಾಗಿ ಖಂಡಿಸಿದರು.
ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘಟನೆಯ ಅಧ್ಯಕ್ಷ ಸಂತೋಷ್ ತಳವಾರ ಪತ್ರಿಕಾ ಪ್ರಕಟಣೆ ನೀಡಿದ್ದು, ಸೆಪ್ಟೆಂಬರ್ 16, 17ರಂದು ಮುಖ್ಯಮಂತ್ರಿ ಅವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಮೂಲಕ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಅವರು ಮುಂದುವರಿದು, “ತಳವಾರ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ತಕ್ಷಣವೇ ಸಮುದಾಯಕ್ಕೆ ಎಸ್‍ಟಿ ಪ್ರಮಾಣ ಪತ್ರ ವಿತರಿಸಬೇಕು, ಇಲ್ಲವಾದರೆ ದೊಡ್ಡ ಮಟ್ಟದ ಹೋರಾಟ ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಕಾನೂನುಬದ್ಧ ಹಕ್ಕು: 2018ರ ಮಾರ್ಚ್ 21ರಂದು ಕೇಂದ್ರ ಸಚಿವ ಸಂಪುಟ ತಳವಾರರನ್ನು ಎಸ್‍ಟಿ ಪಟ್ಟಿಗೆ ಸೇರಿಸಲು ಅನುಮೋದನೆ ನೀಡಿತ್ತು. 2020ರ ಮಾರ್ಚ್ 19ರಂದು ರಾಷ್ಟ್ರಪತಿ ತಿದ್ದುಪಡಿ ಕಾಯ್ದೆಗೆ ಅಂಕಿತ ಹಾಕಿದ್ದರು. 2020ರ ಮಾರ್ಚ್ 20ರಂದು ಗ್ಯಾಜೆಟ್ ಪ್ರಕಟಣೆ ಹೊರಬಂದಿದ್ದು, ತಳವಾರರು ಕಾನೂನುಬದ್ಧವಾಗಿ ಎಸ್‍ಟಿ ಪಟ್ಟಿಯಲ್ಲಿದ್ದಾರೆ.
ಆದರೂ, ಕೆಲ ಪ್ರಭಾವಿ ನಾಯಕರು ಹಾಗೂ ಇತರ ಸಮುದಾಯದವರು ತಪ್ಪು ಪ್ರಚಾರ ನಡೆಸಿ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದು, ಬಡ ಕುಟುಂಬಗಳು ಹಾಗೂ ಅರ್ಹ ವಿದ್ಯಾರ್ಥಿಗಳು ಎಸ್.ಟಿ. ಪ್ರಮಾಣ ಪತ್ರಕ್ಕಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಲಾಗಿದೆ.
ತಳವಾರರಿಗೆ ಎಸ್.ಟಿ. ಪ್ರಮಾಣ ಪತ್ರ ನೀಡುವುದು ಅಧಿಕಾರಿಗಳ ಕಾನೂನುಬದ್ಧ ಕರ್ತವ್ಯವಾಗಿದ್ದರೂ, ತಹಸಿಲ್ದಾರರು ಅನಾವಶ್ಯಕ ಆದೇಶಗಳನ್ನು ಹೆಸರಿಸಿ ಪ್ರಮಾಣ ಪತ್ರ ನೀಡುವುದನ್ನು ತಿರಸ್ಕರಿಸುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮುದಾಯವು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಳವಾರ ಸಮಾಜದ ಜನರು ಭಾಗವಹಿಸಿ ಸರ್ಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಲಾಗಿದೆ.