Home ಜಿಲ್ಲೆ ಕಲಬುರಗಿ ದಾಸ ವೈಭವಕ್ಕೆ ನೃತ್ಯ-ಸಂಗೀತದ ಮೆರುಗು

ದಾಸ ವೈಭವಕ್ಕೆ ನೃತ್ಯ-ಸಂಗೀತದ ಮೆರುಗು

ಕಲಬುರಗಿ,ಏ.5- ಸಂಗೀತ ಮತ್ತು ನೃತ್ಯ ಕನ್ನಡ ಹರಿದಾಸ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದು ಅವುಗಳ ಮಹತ್ವ ‘ದಾಸ ವೈಭವ’ ಕಾರ್ಯಕ್ರಮದಲ್ಲಿ ಸಾಕ್ಷಾತ್ಕಾರಗೊಂಡಿತು. ಓಂಕಾರ ನೃತ್ಯ ಸಾಧನಾ ತಂಡದ ಕಲಾವಿದರಿಂದ ಹರಿದಾಸ ಕೀರ್ತನೆಗಳಿಗೆ ಅಳವಡಿಸಿದ ನೃತ್ಯ ರೂಪಕಗಳು ಮತ್ತು ಖ್ಯಾತ ಸಂಗೀತ ಕಲಾವಿದ ವಿದ್ಯಾಧೀಶ ಆದ್ಯ ಅವರ ದಾಸವಾಣಿ ಕಾರ್ಯಕ್ರಮ ಕಿಕ್ಕಿರಿದು ನರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು.
ಇಲ್ಲಿಯ ದಾಸ ಸಾಹಿತ್ಯ ಸಾಂಸ್ಕøತಿಕ ಪ್ರತಿಷ್ಠಾನ ಟ್ರಸ್ಟ್, ಜೈ ವೀರ ಹನುಮಾನ್ ದೇವಸ್ಥಾನ ಅಭಿವೃದ್ಧಿ ಸಂಘದ ಸಹಯೋಗದೊಂದಿಗೆ ಕರುಣೇಶ್ವರನಗರದ ಜೈ ವೀರ ಹಾನುಮಾನ್ ಮಂದಿರದಲ್ಲಿ ಶನಿವಾರ ನಡೆದ ದತ್ತಿ ಉಪನ್ಯಾಸ, ಸಂಗೀತ, ನೃತ್ಯ ಮತ್ತು ದಾಸವಾಣಿ ಕಾರ್ಯಕ್ರಮ ದಾಸ ಸಾಹಿತ್ಯದ ವೈವಿಧ್ಯತೆ ಮತ್ತು ವೈಶಾಲ್ಯತೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು.
ಡಾ.ಶುಭಾಂಗಿ ಸುಧೀಂದ್ರ ಅವರ ನಿರ್ದೇಶನದಲ್ಲಿ ಓಂಕಾರ ನೃತ್ಯ ಸಾಧನಾ ತಂಡದ ಕಲಾವಿದರು ಪ್ರಸ್ತುತ ಪಡಿಸಿದ ವಿಜಯದಾಸರ ‘ಪವಮಾನ ಜಗದ ಪ್ರಾಣ…’, ಪುರಂದರದಾಸರ ‘ಕಲ್ಲುಸಕ್ಕರೆ ಕೊಳ್ಳಿರೋ…’, ಮತ್ತು ‘ ಡೀಡೀ ಆಡ್ಯಾನೆ ರಂಗ….’ ನೃತ್ಯ ರೂಪಕಗಳು ಹಾಗೂ ಖ್ಯಾತ ಸಂಗೀತ ಕಲಾವಿದ ವಿದ್ಯಾಧೀಶ ಆದ್ಯ ಅವರ ದಾಸವಾಣಿ ಹಾಡುಗಾರಿಕೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು.
ಡಾ.ಸುರೇಶ ಜಾಧವ ಅವರು ತಮ್ಮ ತಾಯಿ ಶ್ರೀಮತಿ ಕಮಲಾಬಾಯಿ ಲಕ್ಷ್ಮಣರಾವ್ ಸ್ಮರಣಾರ್ಥ ಪ್ರತಿಷ್ಠಾಪಿಸಿದ ದತ್ತಿ ಉಪನ್ಯಾಸ ಮಾಡಿದ ಡಾ.ಗುರುರಾಜ ಅಗ್ನಿಹೋತ್ರಿ ಅವರು ಸಮಾಜದಲ್ಲಿ ಕುಟುಂಬ ವ್ಯವಸ್ಥೆಯನ್ನು ಬಲಪಡಿಸಲು ಹರಿದಾಸರು ನೀಡಿದ ಕಾಣಿಕೆ ಅನುಪಮವಾಗಿದೆ ಎಂದು ಹೇಳಿದರು. ಕುಟುಂದ ಪರಿಕಲ್ಪನೆ ಅಪಾಯಕಾರಿಯಾಗಿ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಕನ್ನಡ ಹರಿದಾಸರ ವೈವಿಧ್ಯಮಯ ಕೀರ್ತನೆಗಳು ಸುಭದ್ರ ಕುಟುಂಬ ವ್ಯವಸ್ಥೆಯ ಮರುಸ್ಥಾಪನೆಗೆ ಪರಿಣಾಮಕಾರಿಯಾದ ಪರಿಹಾರ ನೀಡಬಲ್ಲವು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶ್ರೀಮತಿ ಶೋಭಾ ದೇಸಾಯಿ ಅವರು ಮಕ್ಕಳು ಮತ್ತು ಯುವಕರಲ್ಲಿ ಜೀವನ ಮೌಲ್ಯಗಳನ್ನು ಬೆಳೆಸಲು ದಾಸರ ಸಂದೇಶಗಳು ಉಪಯುಕ್ತಕಾರಿಯಾಗಿವೆ ಎಂದು ಹೇಳಿದರು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷ ಶ್ರೀನಿವಾಸ ಸಿರನೂರಕರ್ ಅವರು ಆದ್ಯ ಹರಿದಾಸರಾದ ಶ್ರೀಪಾದರಾಜರ ಪುಣ್ಯತಿಥಿಯನ್ನು ಇನ್ನು ಮುಂದೆ ‘ದಾಸ ಸಾಹಿತ್ಯ ದಿನ’ ವನ್ನಾಗಿ ಆಚರಿಸಲು ಟ್ರಸ್ಟ್ ನಿರ್ಧರಿಸಿದೆ ಎಂದು ತಿಳಿಸಿದರು. ಹಿರಿಯರ ಸ್ಮರಣೆಯಲ್ಲಿ ದತ್ತಿಯನ್ನು ಸ್ಥಾಪಿಸುವ ಮೂಲಕ ದಾಸ ಸಂಸ್ಕೃತಿಯ ಪ್ರಸಾರಕ್ಕೆ ನೆರವಾಗಬೇಕೆಂದು ಕೇಳಿಕೊಂಡರು.
ಟ್ರಸ್ಟಿನ ಗೌರವಾಧ್ಯಕ್ಷರೂ, ಶ್ರೀಸೂಕ್ತ ಬ್ರಾಹ್ಮಣ ಕಲ್ಯಾಣ ನಿಧಿ ವಿಶ್ವಸ್ಥ ಮಂಡಳಿಯ ಕಾರ್ಯದರ್ಶಿಯೂ ಆದ ಡಾ.ಸ್ವಾಮಿರಾವ್ ಕುಲಕರ್ಣಿ ಅವರು ಪ್ರತಿಭಾವಂತ ಬಡ ವಿದ್ಯಾರ್ಥಿನಿ ಕಮಾರಿ ವೃಂದವಲ್ಲಿ ಅವರಿಗೆ ಹತ್ತು ಸಾವಿರ ರೂಪಾಯಿ ಧನಸಹಾಯವನ್ನು ನೀಡಿದರು. ಅವರ ಪದವಿ ಶಿಕ್ಷಣ ಮುಗಿಯುವವರೆಗೆ ಪ್ರತಿವರ್ಷ ಧನಸಹಾಯ ನೀಡಲಾಗುವುದೆಂದು ಪ್ರಕಟಿಸಿದರು.
ಶಾರದಾ ಸಂಗೀತ ವಿದ್ಯಾಲಯದ ಕಲಾವಿದರು ದಾಸರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ದೇವಸ್ಥಾನದ ಸಂಘದ ಅಧ್ಯಕ್ಷರೂ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಅವಿನಾಶ ಕುಲಕರ್ಣಿ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ನಾರಾಯಣ ಕುಲಕರ್ಣಿ ಉಪಸ್ಥಿತಿತರಿದ್ದರು. ಡಾ.ಸುನಂದಾ ಸಾಲವಾಡಗಿ ವಂದಿಸಿದರು.