ಕ್ರೂಸರ್ ಡಿವೈಡರ್‍ಗೆ ಡಿಕ್ಕಿ; ಮೂವರು ಭಕ್ತರು ಸ್ಥಳದಲ್ಲೇ ಸಾವು

ಯಾದಗಿರಿ,ಫೆ.14: ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ತೆರಳುತ್ತಿದ್ದ ಭಕ್ತರ ಕುಟುಂಬದ ಪ್ರಯಾಣ ದುರ್ಘಟನೆಯಲ್ಲಿ ಅಂತ್ಯಗೊಂಡು ಮೂವರು ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದೆ.
ಕರ್ನೂಲ್ ಜಿಲ್ಲೆಯ ಜಡ್ ಚೆರ್ಲಾ ವ್ಯಾಪ್ತಿಯ ತಿಮ್ಮಾನಪಲ್ಲಿ ಗ್ರಾಮದ ಸಮೀಪ ರಾಜ್ಯ ಹೆದ್ದಾರಿ 167ರಲ್ಲಿ ವೇಗವಾಗಿ ಸಾಗುತ್ತಿದ್ದ ಕ್ರೂಸರ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್‍ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗಿದ್ದ ಮೂವರು ಭಕ್ತರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ದುರ್ಘಟನೆಯಲ್ಲಿ ಮೃತಪಟ್ಟವರನ್ನು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ನಿವಾಸಿಗಳಾದ ರಾಮರೆಡ್ಡಿ (52), ಅವರ ಪತ್ನಿ ಮೇಘಾ (50) ಎಂದು ಗುರುತಿಸಲಾಗಿದೆ. ಜೊತೆಗೆ ರಾಮರೆಡ್ಡಿ ಅವರ ಅತ್ತೆ ವಿಜಯಪುರ ಮೂಲದ ಕಲಕೇರಿ ಗ್ರಾಮದ ಮಹಾದೇವಮ್ಮ (65) ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅದೇ ವಾಹನದಲ್ಲಿದ್ದ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಹಾಗೂ ಪೆÇಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಕುಟುಂಬದವರು ಶುಕ್ರವಾರ ಯಾದಗಿರಿಯಲ್ಲಿ ನಡೆದ ಮೊಮ್ಮಗನ ಜವಳ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮ ಮುಗಿದ ಬಳಿಕ ಕುಟುಂಬ ಸಮೇತ ಕ್ರೂಸರ್ ವಾಹನದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ದರ್ಶನಕ್ಕಾಗಿ ಪ್ರಯಾಣ ಬೆಳೆಸಿದ್ದರು. ಇಂದು ನಸುಕಿನ ಜಾವ ಪ್ರಯಾಣದ ವೇಳೆ ಚಾಲಕನಿಗೆ ನಿದ್ದೆ ಮಂಪರು ಬಂದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಹೊರಬಂದಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳೀಯ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.
ಈ ದುರಂತದಿಂದ ಗೋಗಿ ಗ್ರಾಮ ಸೇರಿದಂತೆ ಸಂಬಂಧಿಕರ ವಲಯದಲ್ಲಿ ಶೋಕ ಮಡುಗಟ್ಟಿದೆ.