
ಸೈದಾಪುರ:ಫೆ.11:ಸಮೀಪದ ಗೊಂದೆಡಗಿ ಗ್ರಾಮದ ನಾಗಪ್ಪ ಹಣಮಂತ ಯಲ್ಲಪ್ಪನೋರ್ ಅವರ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿದ್ದ ಒಂದು ಗರ್ಭಿಣಿ ಹಸು, ಎರಡು ಕರುಗಳು ಸಾವನ್ನಪ್ಪಿ, ಒಂದು ಕರುವಿಗೆ ಗಂಭೀರ ಗಾಯಗಳಾದ ದುರ್ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಪ್ರತಿದಿನದಂತೆ ಎತ್ತು, ಹಸು, ಕರುಗಳಿಗೆ ಮೇವು-ನೀರು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿ, ವ್ಯವಸಾಯದ ಕೆಲಸಕ್ಕೆ ಕೂಲಿಕಾರ್ಮಿಕರನ್ನು ಕರೆಯಲು ಗ್ರಾಮದ ಒಳಗಡೆ ನಾಗಪ್ಪ ಅವರು ಹೋಗಿ ಬರುವಷ್ಟರಲ್ಲಿ ಕೊಟ್ಟಿಗೆ ತುಂಬಾ ಬೆಂಕಿ ಆವರಿಸಿಕೊಂಡಿತ್ತು. ಇದರಿಂದ ತಕ್ಷಣವೇ ಕೊಟ್ಟಿಗೆಯಲ್ಲಿದ್ದ ಎರಡು ಎತ್ತುಗಳನ್ನು ಒಂದು ಕರು ಹೊರಗಡೆ ತರುವಷ್ಟರಲ್ಲಿ ಒಳಗಡೆ ಉಳಿದ ಒಂದು ಹಸು ಮತ್ತು ಎರಡು ಕರುಗಳು ಮೃತಪಟ್ಟವು. ನಂತರ ಮನೆಯ ಅಕ್ಕಪಕ್ಕದವರು ಸೇರಿಕೊಂಡು ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಶಾರ್ಟ ಸಕ್ರ್ಯೂಟ್‍ನಿಂದ ಸುಮಾರು 25 ರಿಂದ 40 ಸಾವಿರ ಬೆಲೆ ಬಾಳುವ ಗರ್ಭಿಣಿ ಹಸು, 10 ಸಾವಿರ ಬೆಲೆ ಬಾಳುವ ಎರಡು ಕರು ಜಾನುವಾರುಗಳು, 80 ಹೆಚ್.ಡಿ ಪೈಪ್‍ಗಳು, 65 ವಾಟರ್ ಸ್ಪಿಂಕ್ಲರ್‍ಗಳು, 15 ಬಂಡಲ್ ಪವರ್ ಸ್ಪ್ರೇ ಪೈಪ್‍ಗಳು, 5 ಬಂಡಲ್ ಕರೆಂಟ್ಮೋಟಾರ್ ಕೇಬಲ್, ಬಟ್ಟೆ ಪೈಪ್‍ಗಳು, ಕ್ರಿಮಿನಾಶಕ ಸಿಂಪರಣೆ ಸಾಮಾಗ್ರಿಗಳು, ಸೇರಿದಂತೆ ಕೊಟ್ಟಿಗೆಯಲ್ಲಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಮೌಲ್ಯದ ಕೃಷಿ ಉಪಕರಣಗಳು ಸುಟ್ಟು ಕರಕಲಾಗಿವೆ. ಅಲ್ಲದೆ ಅಪಾರ ಪ್ರಮಾಣದ ಮನೆಯ ಅಗತ್ಯ ದಾಖಲೆಗಳು ಸಹ ಬೆಂಕಿಯಲ್ಲಿ ಸುಟ್ಟಿವೆ. ನಾವು ಬಡರೈತರು ಈ ದುರ್ಘನೆಯಿಂದ ನಮಗೆ ತುಂಬಲಾರದ ನಷ್ಟ ಅನುಭವಿಸುವಂತಾಗಿದೆ ಅಪಾರ ಪ್ರಮಾಣದ ವಸ್ತುಗಳು ಸುಟ್ಟಿವೆ. ಆದ್ದರಿಂದ ಸಂಬಂಧಿಸಿದ ಇಲಾಖೆಯವರಾಗಲಿ ಇಲ್ಲವೇ ಯಾರಾದರೂ ನಮಗೆ ವೈಯಕ್ತಿಕವಾಗಿ ಸಹಾಯವನ್ನು ಮಾಡಿದರೆ ತುಂಬಾ ಅನುಕೂಲವಾಗುತ್ತದೆ ಎಂದು ತಮ್ಮ ಅಳನ್ನು ತೋಡಿಕೊಂಡರು.
ಘಟನೆ ಸುದ್ದಿ ತಿಳಿದ ನಂತರ ಸೈದಾಪುರ ಪೊಲೀಸ್ ಠಾಣೆಯ ಪಿಐ ಶಿವಾನಂದ.ಎಂ ಮರಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದರು.





















