
ಮಧುಗಿರಿ, ಜು. ೨೩- ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಶ್ರೀ ಪ್ರಸನ್ನ ಪಾರ್ವತಿ ಸಮೇತ ಮಲ್ಲೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ರಸ್ತೆಯಲ್ಲಿ ಗಣೇಶೋತ್ಸವ ಆಚರಿಸಲು ೩೦ ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಶೆಡ್ ನಿರ್ಮಿಸಲಾಗುತ್ತಿದೆ ಎಂದು ಪುರಸಭಾಧ್ಯಕ್ಷ ಜಿ.ಎ. ಲಾಲಾಪೇಟೆ ಮಂಜುನಾಥ್ ತಿಳಿಸಿದರು.
ಶ್ರೀ ವಿದ್ಯಾ ಗಣಪತಿ ಮಹಾಮಂಡಳಿ ವತಿಯಿಂದ ಆಗಸ್ಟ್ ೨೭ರಿಂದ ೯ ದಿನಗಳ ಕಾಲ ನಡೆಯುವ ಗಣೇಶೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಪೂರ್ವ ಸಿದ್ಧತಾ ಸಭೆಯಲ್ಲಿ ಹಾಜರಾಗಿದ್ದ ಆರ್. ರಾಜೇಂದ್ರ ಅವರಿಗೆ ಮಂಡಳಿಯವರು ನೀಡಿದ್ದ ಮನವಿಯನ್ನಾಧರಿಸಿ ಈ ಶಾಶ್ವತ ಶೆಡ್ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಭೂಮಿ ಪೂಜೆ ಮಾಡಲಾಗುವುದು ಎಂದರು.
ಪ್ರತಿ ಬಾರಿಯಂತೆ ಈ ಬಾರಿಯೂ ೯ ದಿನಗಳ ಕಾಲ ಗಣೇಶೋತ್ಸವ ನಡೆಸಲಾಗುವುದು. ಗಣಪತಿ ವಿಸರ್ಜನೆ ವೇಳೆ ಪಟ್ಟಣದಲ್ಲಿರುವ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲು ಬಿಇಓ ರವರಲ್ಲಿ ಮನವಿ ಮಾಡಿಕೊಳ್ಳಲಾಗುದು ಎಂದರು.
ಪ್ರತಿನಿತ್ಯ ಧಾರ್ಮಿಕ ಚಟುವಟಿಕೆಗಳು ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮಂಡಳಿಯ ಖಜಾಂಚಿ ಜಿ.ಆರ್.ಧನಪಾಲ್ ಜಮಾ-ಖರ್ಚಿನ ವಿವರ ಸಲ್ಲಿಸಿದರು.
ಈ ಹಿಂದೆ ಚಿ.ಸೂ. ಕೃಷ್ಣಮೂರ್ತಿ ನೇತೃತ್ವದಲ್ಲಿ ನಡೆಯುತ್ತಿದ್ದ ಗಣೇಶ ಉತ್ಸವದ ಉಳಿಕೆ ಹಣದ ಬಗ್ಗೆ ಚರ್ಚೆ ನಡೆದು, ಇಲ್ಲಿಯವರೆಗೂ ಠೇವಣಿ ಹಣದ ಬಡ್ಡಿ ಹಣ ಮಾತ್ರ ಜಮಾವಾಗಿದ್ದು, ಠೇವಣಿ ಹಣ ಯಾರ ಹೆಸರಲ್ಲಿ ಇದೆ ಎಂಬುದು ಇಲ್ಲಿವರೆಗೂ ಗೊತ್ತಾಗಿಲ್ಲ. ಅವರೇ ಹೇಳಿದಂತೆ ಈ ಮಂಡಳಿಯವರು ಸತತವಾಗಿ ಮೂರು ವರ್ಷ ನಡೆಸಿದರೆ ಹಣವನ್ನು ಮಂಡಲಿಗೆ ನೀಡುವುದಾಗಿ ತಿಳಿಸಿದ್ದರು. ೨೦೦೮ರಿಂದ ಇಲ್ಲಿಯವರೆಗೂ ಸತತವಾಗಿ ನಡೆದುಕೊಂಡು ಬಂದಿದ್ದು, ಈ ಹಣವನ್ನು ಅವರ ಮನ ಬಳಿ ಹೋಗಿ ಎಲ್ಲರೂ ಕೇಳೋಣ ಎಂದಾಗ ಅದು ಸಾರ್ವಜನಿಕರ ಹಣ ಅವರೇ ಸಾರ್ವಜನಿಕವಾಗಿ ತಂದು ಕೊಡಲಿ ಎಂದು ಹಾಜರಿದ್ದವರೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ. ಗೋವಿಂದರಾಜು, ಸದಸ್ಯ ಮಂಜುನಾಥ್ ಆಚಾರ್, ಮಾಜಿ ಸದಸ್ಯರುಗಳಾದ ಆರ್‌ಎಲ್‌ಎಸ್ ರಮೇಶ್, ಶ್ರೀನಿವಾಸ್ ,ಧಾರ್ಮಿಕ ಮುಖಂಡ ಎಂ. ಜಿ. ಶ್ರೀನಿವಾಸ್ ಮೂರ್ತಿ ,ಶಂಕರ ಸೇವಾ ಸಮಿತಿಯ ಅಧ್ಯಕ್ಷ ಬಿ. ಆರ್ ಸತ್ಯನಾರಾಯಣ, ಆಡಿಟರ್ ಲಕ್ಷ್ಮಿ ಪ್ರಸಾದ್, ಯುವ ಮುಖಂಡರಾದ ಆನಂದ ಕೃಷ್ಣ, ಕಿಶೋರ್, ಮಾರ್ವಾಡಿ ಸಂಘದ ಮೋಹನ್, ಲಕರಾಂ ಮಂಡಳಿಯ ದೋಲಿಬಾಬು, ಜಿ. ನಾರಾಯಣರಾಜು, ಲಂಬು ಮಂಜುನಾಥ್ ,ಕಿಶೋರ್ ಶೆಟ್ಟಿ, ಬಸವರಾಜು ಹಾಗೂ ಪ್ರಧಾನ ಅರ್ಚಕ ಅನಂತ ಪದ್ಮನಾಭ ಭಟ್ಟರು ಮತ್ತಿತರರು ಉಪಸ್ಥಿತರಿದ್ದರು.