
ಕಲಬುರಗಿ,ಡಿ.13: ಚಿತ್ತಾಪುರ ತಾಲೂಕಿನ ಆಲೂರ(ಬಿ) ಗ್ರಾಮ ಪಂಚಾಯತಿಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೀನಪ್ಪ ಬಸವರಾಜ ಅವರು ರಸ್ತೆ ಅಪಘಾತವೊಂದರಲ್ಲಿ ದುರ್ಮರಣ ಹೊಂದಿದ್ದರಿಂದ ಅವರ ಪತ್ನಿ ಸುಜಾತಾ ಶೀನಪ್ಪ ಅವರಿಗೆ ಶುಕ್ರವಾರ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಅನುಕಂಪ ಆಧಾರದ ಮೇಲೆ ಸರ್ಕಾರಿ ನೌಕರಿಯ ನೇಮಕಾತಿ ಆದೇಶ ಪತ್ರ ವಿತರಿಸಿದರು.
ಶೀನಪ್ಪ ಬಸವರಾಜ ಅವರು ಸೇವೆಯಲ್ಲಿರುವಾಗಲೇ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದರು. ಸರ್ಕಾರದ ನಿಯಮಾವಳಿಯಂತೆ ಚಿತ್ತಾಪುರ ತಾಲೂಕಾ ಪಂಚಾಯತ್ ಇ.ಓ ಅವರ ಪ್ರಸ್ತಾವನೆ ಮೇರೆಗೆ ಮೃತ ನೌಕರರ ಪತ್ನಿ ಸುಜಾತಾಶೀನಪ್ಪ ಅವರನ್ನು ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿ ಆದೇಶಿಸಿದೆ.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಇದ್ದರು.

























