
ಬೀದರ್:ಏ.5: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನ ನಿಮಿತ್ತ ನಗರದಲ್ಲಿ ಏ. 9 ರಂದು ಬೈಕ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಕರ್ತರ ರಾಜ್ಯ ಸಮ್ಮೇಳನದ ಪ್ರಚಾರ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ನಗರದ ಬಸವೇಶ್ವರ ವೃತ್ತದಿಂದ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ, ಶಿವನಗರ ಮಾರ್ಗವಾಗಿ ಪ್ರತಾಪನಗರದ ಪತ್ರಿಕಾ ಭವನದ ವರೆಗೆ ರ್ಯಾಲಿ ಜರುಗಲಿದೆ ಎಂದು ಸಮಿತಿಯ ಪ್ರಮುಖರು ತಿಳಿಸಿದರು.
ಕಟೌಟ್, ಬ್ಯಾನರ್, ಭಿತ್ತಿ ಪತ್ರ, ಆಟೊಗಳಿಗೆ ಸ್ಟಿಕ್ಕರ್ ಅಳವಡಿಕೆ, ಎಐ ಬಳಕೆ, ಪೆನ್ನು-ಗುಲಾಬಿ ಹೂವು ಕೊಟ್ಟು ಪತ್ರಕರ್ತರಿಗೆ ಆಹ್ವಾನ ಸೇರಿದಂತೆ ವಿವಿಧ ರೀತಿಯಲ್ಲಿ ಸಮ್ಮೇಳನದ ಪ್ರಚಾರ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ವಿವಿಧ ಉಪ ಸಮಿತಿಗಳ ಸಮ್ಮೇಳನದ ಸಿದ್ಧತೆ ಹಾಗೂ ಚಟುವಟಿಕೆ ಕುರಿತು ಹೆಚ್ಚೆಚ್ಚು ಪ್ರಚಾರ ಕೈಗೊಳ್ಳಲು ನಿರ್ಣಯಿಸಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ, ಸಮ್ಮೇಳನ ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ನಾಗೇಶ ಪ್ರಭಾ, ಸಹ ಸಂಚಾಲಕ ಮಲ್ಲಿಕಾರ್ಜುನ ನಾಗರಾಳ, ಸದಸ್ಯ ಮಹಾರುದ್ರ ಡಾಕುಳಗಿ ಇದ್ದರು.




















