ಭಯೋತ್ಪಾದನೆ ನಿಗ್ರಹಕ್ಕೆ ಬದ್ಧ

ಪ್ರಧಾನಿ ಮಲೇಷಿಯಾ ಪ್ರವಾಸ

ಕೌಲಾಲಂಪುರ, ಫೆ. ೮- ಭಯೋತ್ಪಾದನೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಭಯೋತ್ಪಾದನೆ ನಿರ್ಮೂಲನೆಗೆ ಭಾರತ ಸದಾ ಬದ್ಧ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಛರಿಸಿದರು.


ಮಲೇಷಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಮಲೇಷಿಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಜತೆ ಭಾರತ ಮತ್ತು ಮಲೇಷಿಯಾದ ಬಾಂಧವ್ಯ ಬಲವರ್ಧನೆ ಬಗ್ಗೆ ಸುದೀರ್ಘ ಮಾತುಕತೆ ನಡೆಸಿ ಮಾತನಾಡಿ, ಭಯೋತ್ಪಾದನೆಯನ್ನು ಎದುರಿಸುವ ಬಗ್ಗೆ ಭಾರತದ ನಿಲುವನ್ನು ಪುನರುಚ್ಛರಿಸಿದರು.ಭಯೋತ್ಪಾದನೆ ವಿಚಾರದಲ್ಲಿ ರಾಜಿ ಇಲ್ಲ. ನಮ್ಮ ಸಂದೇಶ ಸ್ಪಷ್ಟವಾಗಿದೆ. ದ್ವಿಮುಖ ನೀತಿಗಳಿಲ್ಲ ಎಂದರು.


ಭಾರತ ಮತ್ತು ಮಲೇಷಿಯಾ ವಿಶೇಷ ಸಂಬಂಧವನ್ನು ಹೊಂದಿದೆ. ನಾವು ಕಡಲ ನೆರೆ ಹೊರೆಯವರು. ಶತಮಾನಗಳಿಂದ ನಮ್ಮ ಜನ ಗಾಢ ಸಂಬಂಧವನ್ನು ಹೊಂದಿದ್ದಾರೆ. ಮಲೇಷಿಯಾ ಭಾರತೀಯ ಮೂಲದ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ೨ನೇ ದೇಶವಾಗಿದೆ ಎಂದರು.
ಭಯೋತ್ಪಾದನೆ ನಿಗ್ರಹ, ಗುಪ್ತಚರ ಮಾಹಿತಿ ಹಂಚಿಕೆ ಮತ್ತು ಕಡಲ ಭದ್ರತೆಯಲ್ಲಿ ಎರಡೂ ದೇಶಗಳು ಪರಸ್ಪರ ಸಹಕಾರ ವನ್ನು ಬಲಪಡಿಸಲಿವೆ ಎಂದು ಮೋದಿ ಹೇಳಿದರು.


ನಾವು ರಕ್ಷಣಾ ಸಹಕಾರವನ್ನು ಹೆಚ್ಚು ಸಮಗ್ರಗೊಳಿಸುತ್ತೇವೆ. ಎಐ ಮತ್ತು ಡಿಜಿಟಲ್ ತಂತ್ರಜ್ಞಾನ ಜತೆಗೆ ಸೆಮಿ ಕಂಡಕ್ಟರ್, ಆರೋಗ್ಯ ಮತ್ತು ಆಹಾರ ಭದ್ರತೆಯಲ್ಲಿ ಮಲೇಷಿಯಾ ಜತೆಗೆ ಪಾಲುದಾರಿಕೆಯನ್ನು ಮುನ್ನಡೆಸುತ್ತೇವೆ ಎಂದರು.


ಇಂಡೋ-ಫೆಸಿಫಿಕ್ ಪ್ರದೇಶವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿ ಹೊರ ಹೊಮ್ಮುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಮತ್ತು ಮಲೇಷಿಯಾ ವಿಶೇಷ ಸಂಬಂಧವನ್ನು ಹೊಂದಿವೆ. ಎರಡೂ ದೇಶಗಳು ವೈವಿಧ್ಯಮಯ ಕ್ಷೇತ್ರಗಳಲ್ಲಿ ತಮ್ಮಸಂಬಂಧಗಳನ್ನು ವಿಸ್ತರಿಸಲು ಬದ್ಧವಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.


ಪ್ರಧಾನಿ ಮೋದಿ ಮತ್ತು ಮಲೇಷಿಯಾ ಪ್ರಧಾನಿಗಳ ಮಾತುಕತೆ ಸಂದರ್ಭದಲ್ಲಿ ಎರಡೂ ದೇಶಗಳು ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಹಲವಾರು ಉಪಕ್ರಮಗಳನ್ನು ಘೋಷಿಸಿದವು.


ಇಂದು ಪ್ರಧಾನಿ ಮತ್ತು ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಿದ್ದು, ಎರಡೂ ದೇಶಗಳ ಹಲವಾರು ಒಪ್ಪಂಗಳಿಗೆ ಸಹಿ ಹಾಕಿವೆ. ಒಪ್ಪಂದಗಳ ಪ್ರಕಾರ ಉಭಯ ರಾಷ್ಟ್ರಗಳು ಸೆಮಿ ಕಂಡಕ್ಟರ್ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಒದಗಿಸಲಿವೆ. ಎರಡು ದಿನಗಳ ಮಲೇಷಿಯಾ ಭೇಟಿಯಲ್ಲಿರುವ ಪ್ರಧಾನಿ ಮೋದಿ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಭಾರತ ಮತ್ತು ಮಲೇಷಿಯಾ ರಕ್ಷಣಾ ಸಹಕಾರವನ್ನು ಮತ್ತಷ್ಟು ಸಮಗ್ರಗೊಳಿಸುತ್ತವೆ. ಎರಡೂ ದೇಶಗಳು ವಿಶೇಷ ಸಂಬಂಧವನ್ನು ಹಂಚಿಕೊಳ್ಳಲಿವೆ ಎಂದು ಪ್ರತಿಪಾದಿಸಿದರು.


ಭಾರತ ಮತ್ತು ಮಲೇಷಿಯಾ ವ್ಯಾಪಾರ, ಹೂಡಿಕೆ, ಸಂಪರ್ಕ ಮತ್ತು ರಕ್ಷಣೆಯಲ್ಲಿನ ಸಹಯೋಗದ ವಿಸ್ತರಣೆಯನ್ನು ಮುಂದುವರಿಸಿವೆ ಎಂದು ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಹೇಳಿದರು.

ಭವ್ಯ ಸ್ವಾಗತ


ಇದಕ್ಕೂ ಮೊದಲು ಆಜ್ಞೆಯ ಏಷ್ಯಾ ದೇಶವಾದ ಮಲೇಷಿಯಾಗೆ ಎರಡು ದಿನಗಳ ಭೇಟಿಗಾಗಿ ಕ್ವೌಲಾಲಂಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.


ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾರತದ ಪ್ರಧಾನಿ ಅವರನ್ನು ಬರ ಮಾಡಿಕೊಂಡರು. ಪರಸ್ಪರ ಮಾತುಕತೆಗೂ ಮುನ್ನ ಪ್ರಧಾನಿ ಮೋದಿಯವರಿಗೆ ಪರ್ದಾನ ಪುತ್ರ ಗೌರವ ಪ್ರದಾನ ಮಾಡಲಾಯಿತು.

ಮಲೇಷಿಯಾದಲ್ಲಿ ತಮಗೆ ಭವ್ಯವಾದ ಸ್ವಾಗತ ಕೋರಿದ ಮಲೇಷಿಯಾದ ಜನತೆಗೆ ಹಾಗೂ ಮಲೇಷಿಯಾದ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ಮೋದಿ ಅವರು, ತಮಗೆ ದೊರೆತ ಆತ್ಮೀಯ ಸ್ವಾಗತ ನೀಡಿ ಬರಮಾಡಿಕೊಂಡಿದ್ದು ಹೃದಯ ತುಂಬಿ ಬಂದಿದೆ ಎಂದು ಭಾವುಕರಾಗಿ ಎಕ್ಸ್‌ನಲ್ಲಿ ಫೋಸ್ಟ್ ಮಾಡಿ, ಪುತ್ರಜಯದಲ್ಲಿನ ಪರ್ದಾನ ಪುತ್ರ ಔಪಚಾರಿಕ ಸ್ವಾಗತದ ಕ್ಷಣಗಳು ಭಾರತ ಮತ್ತು ಮಲೇಷಿಯಾ ನಡುವಿನ ನಂಬಿಕೆ, ಸ್ನೇಹ ಮತ್ತು ಹಂಚಿಕೆಯ ಆಕಾಂಕ್ಷೆಗಳಲ್ಲಿ ಬೇರೂರಿರುವ ಪಾಲುದಾರಿಕೆಯನ್ನು ಮತ್ತುಷ್ಟು ಗಾಢಾವಾಗಿಸುತ್ತಿವೆ ಎಂದು ತಿಳಿಸಿದ್ದಾರೆ.

ಭಾರತೀಯರನ್ನುದ್ದೇಶಿಸಿ ಭಾಷಣ


ಮಲೇಷಿಯಾದಲ್ಲಿರುವ ಭಾರತೀಯರಿಂದ ಪ್ರಧಾನಿ ಮೋದಿ ಅವರಿಗೆ ಅಭೂತ ಪೂರ್ವ ಸ್ವಾಗತ ಸಿಕ್ಕಿದ್ದು, ಮಲೇಷಿಯಾದಲ್ಲಿರುವ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಭಾರತೀಯ ವಲಸಿಗರು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಭಾಗಿಯಾದರು.


ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ., ಕಥಕಳಿ, ಕುಚುಪುಡಿ, ಯಕ್ಷಗಾನ, ಲಾವಣಿ, ಮತ್ತು ಒಡಿಸ್ಸಿ ನೃತ್ಯ ಸೇರಿದಂತೆ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ೮೦೦ ಕ್ಕೂ ಹೆಚ್ಚು ಕಲಾವಿದರು ಪ್ರದರ್ಶಿಸಿ ಭಾರತದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿದರು.