ನಾಳೆ ದಾಖಲೆಯ ೧೭ನೇ ಬಜೆಟ್ ಮಂಡಿಸಲಿರುವ ಸಿಎಂ

ಬೆಂಗಳೂರು, ಮಾ. ೫- ರಾಜ್ಯಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಜಟಾಪಟಿ ನಡೆದಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ದಾಖಲೆಯ ೧೭ನೇ ಬಜೆಟ್‌ನ್ನು ಮಂಡಿಸಲಿದ್ದಾರೆ.


ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುವ ಜತೆ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ, ಹೊಸ ಜನಪರ ಕಾರ್ಯಕ್ರಮಗಳನ್ನು ಘೋಷಿಸಿ ಅವುಗಳಿಗೂ ಸಂಪನ್ಮೂಲ ಒದಗಿಸುವ ಸವಾಲು ಇದ್ದು, ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವ ಯಾವ ಯೋಜನೆಗಳಿಗೆ ಎಷ್ಟೆಷ್ಟು ಹಣ ಒದಗಿಸುತ್ತಾರೆ, ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡುತ್ತಾರೆಯೇ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.


ರಾಜ್ಯದ ಬಹುಪಾಲು ಆದಾಯ ಗ್ಯಾರಂಟಿಯೋಜನೆಗಳಿಗೆ ಬಳಕೆಯಾಗುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಎಂಬ ವಿಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಭಿವೃದ್ಧಿ ಕಾರ್ಯಗಳಿಗೆ ಬರಪೂರ ಅನುದಾನ ನೀಡುವ ನಿರೀಕ್ಷೆ ಇದ್ದು, ಸಂಪನ್ಮೂಲ ಸಂಗ್ರಹಕ್ಕೆ ಪೆಟ್ರೋಲ್ ಮತ್ತುಡಿಸೇಲ್ ಮೇಲೆ ಶೇ. ೧ರಷ್ಟು ಸೆಸ್ ಜಾರಿ ಮಾಡುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿಗೆ ಈಗಾಗಲೇ ಭಾಜನರಾಗಿದ್ದು,ನಾಳೆತಮ್ಮ ೧೭ನೇ ಬಜೆಟ್ ಮಂಡಿಸಲಿದ್ದಾರೆ.


ನಾಳಿನ ಬಜೆಟ್‌ನ ಗಾತ್ರ ಕಳೆದಬಾರಿಯ ಬಜೆಟ್ ಗಾತ್ರಕ್ಕಿಂತ ಹೆಚ್ಚಾಗಲಿದ್ದು, ಸರಿ ಸುಮಾರು ೪ ಲಕ್ಷ ೫೦ ಸಾವಿರ ಕೋಟಿ ಆಸುಪಾಸಿನಲ್ಲಿ ನಾಳಿನ ಬಜೆಟ್ ಗಾತ್ರ ಇರಲಿದೆ ಎಂದು ಅಂದಾಜಿಸಲಾಗಿದೆ.


ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚು ಸಾಲ ಮಾಡಲಾಗಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳಿನ ಬಜೆಟ್‌ನಲ್ಲಿ ವಿತ್ತೀಯ ಕೊರತೆಯನ್ನು ಯಾವ ರೀತಿ ನಿಭಾಯಿಸುತ್ತಾರೆ, ಸಾಲದ ಮಿತಿ ನಿಗದಿ ಗುರಿಯೊಳಗೆ ಇರಲಿದೆಯೇ ಎಂಬುದು ಕುತೂಹಲ ಮೂಡಿಸಿದ್ದು, ವಿತ್ತೀಯ ಕೊರತೆ ಎಷ್ಟಿದೆ, ರಾಜ್ಯ ಆರ್ಥಿಕ ಪರಿಸ್ಥಿತಿ ಏನು ಎಂಬುದೆಲ್ಲಾ ನಾಳಿನ ಬಜೆಟ್ ನಂತರ ಗೊತ್ತಾಗಲಿದೆ.


ಹಲವು ಜನಪರ ಯೋಜನೆಗಳ ಘೋಷಣೆ ಸಾಧ್ಯತೆ


ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಾಳಿನ ಬಜೆಟ್‌ನಲ್ಲಿ ಹಲವು ಹೊಸ ಜನಪರ ಕಾರ್ಯಕ್ರಮಗಳನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ವಸತಿ, ಶಿಕ್ಷಣ ಕ್ಷೇತ್ರಗಳಿಗೆ ಹೊಸ ಯೋಜನೆ ಹಾಗೆಯೇ ಮಹಿಳೆಯರ ಸಬಲೀಕರಣಕ್ಕೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.


ಜನ ಸಾಮಾನ್ಯರಿಗೆ ಹೊರೆಯಾಗದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಯಾವ ರೀತಿ ಬಜೆಟ್ ಮಂಡಿಸುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ನಾಳಿನ ಬಜೆಟ್ ನಂತರವೇ ಎಲ್ಲದ್ದಕ್ಕೂ ಉತ್ತರ ಸಿಗಲಿದೆ.