
ಜಮ್ಮು, ಆ.14-ಜಮ್ಮು ಕಾಶ್ಮೀರದ ಕಿಸ್ತ್ ವಾರ್ ನಲ್ಲಿ ಸಂಭವಿಸಿದ ವಿನಾಶಕಾರಿ ಮೇಘ ಸ್ಫೋಟದಲ್ಲಿ ಇಬ್ಬರು ಸಿಐಎಸ್ ಎಫ್ ಯೋಧರು ಸೇರಿದಂತೆ 33 ಮಂದಿ ದುರ್ಮರಣಕ್ಕೀಡಾಗಿದ್ದಾರೆ.
ದುರ್ಘಟನೆಯಲ್ಲಿ 120 ಮಂದಿ ಗಾಯಗೊಂಡಿದ್ದು, ಕನಿಷ್ಠ 200 ಮಂದಿ ನಾಪತ್ತೆಯಾಗಿದ್ದಾರೆ. ಪರಿಹಾರ ತಂಡಗಳು ಘಟನಾ ಸ್ಥಳದಲ್ಲಿ ಶೋಧ ಕಾರ್ಯ ಕೈಗೊಂಡಿದೆ.
ಮಚೈಲ್ ಮಾತಾ ದೇವಾಲಯದ ಬಳಿಯ ಚಶೋತಿಯಲ್ಲಿ ಘಟನೆ ನಡೆದಿದ್ದು, ಹೆಚ್ಚಿನ ಸಾವು ನೋವುಗಳಿಗೆ ಕಾರಣವಾಗಬಹುದು. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಶೋತಿ ಗ್ರಾಮದಲ್ಲಿರುವ ಹಿಂದೂ ದೇವಾಲಯವಾದ ಮಚೈಲ್ ಮಾತಾ ದೇವಸ್ಥಾನದ ಲಂಗರ್‌ನಲ್ಲಿ ಭಕ್ತರು ಊಟ ಮಾಡುತ್ತಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ಭಾರೀ ಶಬ್ದದೊಂದಿಗೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮಚೈಲ್ ಮಾತಾ ಯಾತ್ರೆಗಾಗಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು. ಅಲ್ಲಿಂದ ದೇವಾಲಯಕ್ಕೆ 8.5 ಕಿ.ಮೀ. ಪಾದಯಾತ್ರೆ ಪ್ರಾರಂಭವಾಗುತ್ತದೆ. ಹನ್ನೆರಡು ಶವಗಳನ್ನು ಪತ್ತೆಹಚ್ಚಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಸೋಟಿ 9,500 ಅಡಿ ಎತ್ತರದಲ್ಲಿ ಮತ್ತು ಕಿಶ್ತ್ವಾರದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ.
ಮೋದಿ ಸಂತಾಪ
ದುರಂತದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯ ಬಗ್ಗೆ ನಿಗಾವಹಿಸಿದ್ದು, ಪರಿಹಾರ ಕಾರ್ಯಗಳಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲಾಗಿದೆ ಎಂದು ಅವರು ಭರವಸೆ ನೀಡಿದ್ದಾರೆ.