
ನಾಗರಾಜ ಕುಂಬಾರ
ಕೊಲ್ಹಾರ: ಜೂ.೩೦:ಪಟ್ಟಣದ ಶಾಲೆ-ಕಾಲೇಜು ಪ್ರದೇಶಗಳು, ಬಸ್ ನಿಲ್ದಾಣಗಳು ಹಾಗೂ ಜನಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ನಿಯಮವನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಸಿಗರೇಟ್ ಅಡ್ಡಾಗಳು ಮಕ್ಕಳ ಹಾಗೂ ಯುವಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇಂತಹ ಅಂಗಡಿಗಳ ಪ್ರಭಾವಕ್ಕೆ ವಿದ್ಯಾರ್ಥಿಗಳು ಒಳಗಾಗುತ್ತಿದ್ದಾರೆ ಎಂಬ ಆತಂಕ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಅಡ್ಡಾಗಳ ಆಕರ್ಷಣೆಗೆ ಸಿಲುಕುತ್ತಿರುವ ಯುವಕರು ಪಟ್ಟಣದಲ್ಲಿ ಟೀ ಸಿಗರೇಟ್ ಅಂಗಡಿಗಳ ಸುತ್ತ ಯುವಕರು ಗುಂಪು ಗುಂಪಾಗಿ ಕಾಲ ಕಳೆಯುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಕೆಲವರು ಇನ್ನಷ್ಟು ಹಾನಿಕರವಾದ ತಂಬಾಕು ಪದಾರ್ಥಗಳ ಬಳಕೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಆತಂಕವೂ ಉಂಟಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಅಡ್ಡಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದ ಸಮಾಜದ ಆರೋಗ್ಯದ ಮೇಲೆ ಕಳವಳಕಾರಿಯಾದ ಪರಿಣಾಮಗಳು ಬೀಳುತ್ತಿವೆ.ಈ ಅಂಗಡಿಗಳು ಶಾಲೆ-ಕಾಲೇಜುಗಳ ಹತ್ತಿರ ಇದ್ದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತಿವೆ. ಮಕ್ಕಳು ಶಾಲೆಗೆ ಹೋಗುವಾಗ ಈ ತಂಬಾಕು ಮಾರಾಟದ ಅಂಗಡಿಗಳನ್ನು ಪ್ರತಿದಿನವೂ ನೋಡಿ ಮನಸ್ಸಿನಲ್ಲಿ ನಕಾರಾತ್ಮಕ ಪ್ರಭಾವಕ್ಕೊಳಗಾಗುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ್ಣದ) ಅಧ್ಯಕ್ಷ ರವಿ ಗೊಳಸಂಗಿ ತಿಳಿಸಿದ್ದರು. ಈ ಕುರಿತು ಸ್ಥಳೀಯ ಆಡಳಿತವು ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮಕ್ಕಳಿಗೆ ಹಾನಿಕರ ಪರಿಣಾಮಗಳು:
ಬಾಲಕರು ಇಂತಹ ಅಡ್ಡಗಳಲ್ಲಿ ತಮಾಕು ಸೇವನೆ, ಮಧ್ಯಪಾನ ಸೇವನೆ, ಕ್ರೂರ ಭಾಷಾ ಬಳಕೆ ಮುಂತಾದ ದುರ್ಬುದ್ದಿಗಳಿಗೆ ಒಳಗಾಗುತ್ತಿದ್ದಾರೆ. ಅವರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಇದರ ದುಷ್ಪರಿಣಾಮ ಬೀರುತ್ತಿದ್ದು, ಭವಿಷ್ಯಕ್ಕೂ ಇದು ಹಾನಿಕಾರಕವಾಗಿದೆ.
ಸ್ಥಳೀಯರ ಆಕ್ರೋಶ:
“ನಾವು ಮಕ್ಕಳಿಗೆ ಉತ್ತಮ ವಿದ್ಯೆ, ಸಂಸ್ಕಾರ ಕಲಿಸಬೇಕೆಂದು ಶ್ರಮಿಸುತ್ತಿದ್ದೇವೆ. ಆದರೆ ಹತ್ತಿರದಲ್ಲೇ ಇಂತಹ ಅಡ್ಡಗಳು ಇದ್ದರೆ, ಎಲ್ಲ ಪ್ರಯತ್ನಗಳು ವ್ಯರ್ಥವಾಗುತ್ತವೆ” ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.
ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು:
ಸಿಗರೇಟ್ ಅಡ್ಡಗಳು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗೂ ಹಾನಿಯುಂಟುಮಾಡುತ್ತಿವೆ. ಕಡಿಮೆ ಆದಾಯದ ಕುಟುಂಬಗಳು ತಂಬಾಕು ಉತ್ಪನ್ನಗಳಿಗೆ ಖರ್ಚು ಮಾಡುವ ಹಣವು ಶಿಕ್ಷಣ, ಆಹಾರ ಮತ್ತು ಆರೋಗ್ಯ ಸೇವೆಗಳಿಗೆ ಬಳಸಬೇಕಾದ ಸಂಪನ್ಮೂಲಗಳನ್ನು ಕಡಿಮೆ ಮಾಡುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಕೆಲವು ಮಕ್ಕಳು ಶಾಲೆಯಿಂದ ದೂರವಾಗುವ ಪರಿಸ್ಥಿತಿ ಉಂಟಾಗಿದೆ.
ಕೊಲ್ಹಾರದಲ್ಲಿ ಸಿಗರೇಟ್ ಅಡ್ಡಗಳು ಎಲ್ಲೆಡೆ ತಲೆ ಎತ್ತಿವೆ. ಯುವಕರು ಮತ್ತು ಮಕ್ಕಳು ಈ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಯಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಎಂದರು,
ಡಿ.ಎಸ್.ಎಸ್ ತಾಲೂಕು ಸಹ ಸಂಚಾಲಕ ತಿಪ್ಪಣ್ಣ ಕುದರಿ