
ಬೆಂಗಳೂರು,ಫೆ.೧೬- ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ೫ನೇ ಆರೋಪಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
ಪ್ರಕರಣದ ಸಂಬಂಧ ನಗರದ ೪೨ನೇ ಎಸಿಜೆಎಂ ಕೋರ್ಟ್ ನ್ಯಾಯಾಧೀಶರ ಆದೇಶ ಮೇರೆಗೆ ೭ ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗಿದೆ.
ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ನೇತೃತ್ವದ ಅಧಿಕಾರಿಗಳ ತಂಡ ಬಸವರಾಜ್ ಅವರನ್ನು ವಿಚಾರಣೆ ನಡೆಸಿ ರೌಡಿ ಬಿಕ್ಲು ಶಿವ ಕೊಲೆ ಸಂಬಂಧ ಮಾಹಿತಿಯನ್ನು ಕಲೆ ಹಾಕತೊಡಗಿದೆ.
ಕಳೆದ ಜುಲೈ ೧೫ರಂದು ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಪ್ರಕಾಶ್ ಕೊಲೆ ನಡೆದಿತ್ತು. ಕಾರಿನಲ್ಲಿ ಬಂದಿದ್ದ ೮-೯ ಜನ ದುಷ್ಕರ್ಮಿಗಳು ಶಿವಪ್ರಕಾಶ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ಶಿವಪ್ರಕಾಶ್ ತಾಯಿ ದೂರು:
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್, ಕಿರಣ್, ವಿಮಲ್, ಅನಿಲ್ ಮತ್ತು ಬೈರತಿ ಬಸವರಾಜ್, ಇತರರ ವಿರುದ್ಧ ಭಾರತೀನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಇದಾದ ಬಳಿಕ, ಬೈರತಿ ಬಸವರಾಜ್ ಅವರು ಫೆಬ್ರವರಿ ೧೨ರಂದು ಅಹಮದಾಬಾದ್‌ನಿಂದ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಪೊಲೀಸರು ವಶಕ್ಕೆ ಪಡೆಯಲಾಗಿತ್ತು.



























