ಮತ್ತೆ 3 ದಿನ ಚಿನ್ನಯ್ಯ ಎಸ್ ಐಟಿ ಕಸ್ಟಡಿಗೆ

ಮಂಗಳೂರು, ಸೆ.3- ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಬಂಧಿನಕ್ಕೊಳಗಾಗಿರುವ ಚಿನ್ನಯ್ಯನನ್ನ ಮತ್ತೆ 3 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ.


ಸೆ.6ರಂದು ಚಿನ್ನಯ್ಯನನ್ನ ಕೋರ್ಟ್‌ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಇಂದು ಸೂಚಿಸಿದೆ.


12 ದಿನಗಳ ಎಸ್‌ಐಟಿ ಕಸ್ಟಡಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯಾನಂದ.ಟಿ ಅವರ ಎದುರು ಹಾಜರುಪಡಿಸಲಾಯಿತು.


ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್‌ ದಯಾಮ, ಸರ್ಕಾರಿ ಅಭಿಯೋಜಕರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಇಬ್ಬರು ವಕೀಲರು ಈ ವೇಳೆ ಕೋರ್ಟ್‌ನಲ್ಲಿ ಹಾಜರಿದ್ದರು. ಬಳಿಕ ಕೋರ್ಟ್‌ನ ಬಾಗಿಲುಗಳನ್ನು ಮುಚ್ಚಿ ವಿಚಾರಣೆ ನಡೆಸಲಾಯಿತು.


ವಿಚಾರಣೆಗೂ ಮುನ್ನ ಸರ್ಕಾರಿ ಅಭಿಯೋಜಕರು ಕೋರ್ಟ್‌ಗೆ ತನಿಖಾ ಪ್ರಗತಿ ವರದಿ ಹಾಗೂ ೭ ಸಾಕ್ಷಿ ಸಂಗ್ರಹಣೆ, ಬಾಕಿ ವಿಚಾರಣೆ ಇತ್ಯಾದಿ ವಿವರಗಳನ್ನೂ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಎಸ್‌ಐಟಿಯಿಂದಲೂ ತನಿಖಾ ಪ್ರಗತಿ ವರದಿಯನ್ನ ಕೋರ್ಟ್‌ಗೆ ಸಲ್ಲಿಸಲಾಯಿತು.


ಕಾನೂನು ಸೇವಾ ಪ್ರಾಧಿಕಾರದ ವಕೀಲರು ಚಿನ್ನಯ ಪರ ವಾದ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು ದೆಹಲಿ, ತಮಿಳುನಾಡಿನಲ್ಲಿ ಮಹಜರು ನಡೆಸಬೇಕಾಗಿದ್ದು ಚಿನ್ನಯ್ಯನನ್ನು ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.


ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಚಿನ್ನಯ್ಯನನ್ನು ಮತ್ತೆ 3 ದಿನ ಕಸ್ಟಡಿಗೆ ನೀಡಿ ಆದೇಶಿಸಿದರು.