
ಅಫಜಲಪುರ,ಅ.26: ಇತ್ತೀಚೆಗೆ ಅತಿಯಾದ ಮಳೆ ಮತ್ತು ಅಪಾರ ಪ್ರಮಾಣದ ಭೀಮಾನದಿಗೆ ನೀರು ಬಿಟ್ಟಿರುವುದರಿಂದ ಪ್ರವಾಹಕ್ಕೆ ಚಿನಮಳ್ಳಿ ಮತ್ತು ಜೇವರ್ಗಿ ತಾಲೂಕಿನ ಕಲ್ಲೂರ ಮದ್ಯ ನಿರ್ಮಾಣ ಮಾಡಿರುವ “ಬ್ರಿಡ್ಜ್ ಕಂ.ಬ್ಯಾರೇಜ್” ಚಿನಮಳ್ಳಿ ಎಡದಂಡೆಯ ರೈತರ ಜಮೀನು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಮೂಲಕ ಮಂದೇವಾಲ ಮತ್ತು ನೆಲೋಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿತು.
ದಸರಾ ರಜೆ ಮುಗಿಸಿ ಮರಳಿ ಶಾಲೆಗೆ ಹೋಗಲು ಚಿನಮಳ್ಳಿ ಸೇತುವೆ ಮೂಲಕ ಮಂದೇವಾಲ ಖಾಸಗಿ ಶಾಲೆಗೆ ಹೋಗಬೇಕಾದರೆ, ಚಿನಮಳ್ಳಿ ಸೇತುವೆ ಮೇಲಿಂದ ನಡೆದುಕೊಂಡು ಮಕ್ಕಳು ಹೋಗುತ್ತಿರುವಾಗ ಆಯಾ ತಪ್ಪಿ ಕೆಳಗೆ ಬಿದ್ದರೆ ಜೀವಕ್ಕೆ ಅಪಾಯ ಆಗುವ ಸಾಧ್ಯತೆ. ಇದನ್ನು ಮನಗಂಡ ಸಂಜೆವಾಣಿ ತಾಲೂಕು ಪ್ರತಿನಿಧಿ ಶನಿವಾರ ದ ಸಂಚಿಕೆಯಲ್ಲಿ( ಅ.25 )” ಜೀವ ಕೈಯಲ್ಲಿ ಹಿಡಿದು ಬ್ರಿಡ್ಜ್ ದಾಟುತ್ತಿರುವ ಶಾಲಾ ಮಕ್ಕಳು ” ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಬಿತ್ತರಿಸಿ ಜನಪ್ರತಿನಿಧಿಗಳಿಗೆ ಮತ್ತು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆಯಿತು.
ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಶಾಸಕ ಎಂ.ವೈ.ಪಾಟೀಲ ಅವರ ಗಮನಕ್ಕೆ ಬಂದ ತಕ್ಷಣವೇ ಕೆಬಿಜಿಎನ್ ಎಲ್ ಅಧಿಕಾರಿಗಳಿಗೆ ಮನೆಗೆ ಕರೆಯಿಸಿ ನೀವೇನ್ ಮಾಡ್ತಿರಿ ಗೊತ್ತಿಲ್ಲ ಕೂಡಲೇ ಇಂದೇ ತಾತ್ಕಾಲಿಕ ಮುರಮ್ ಹಾಕಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ರಸ್ತೆ ಸಂಪರ್ಕ ಕಲ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಖಡಕ್ ಸಂದೇಶ ನೀಡಿದರು. ಶಾಸಕರ ಆದೇಶಕ್ಕೆ ತಕ್ಷಣವೇ ಎಚ್ಚೆತ್ತುಕೊಂಡ ಕೆಬಿಜಿಎನ್‍ಎಲ್ ಇಲಾಖೆ ಅಧಿಕಾರಿಗಳಾದ ಯು.ಪಿ.ಸೋನಾವಣೆ, ಲಕ್ಷ್ಮಿಕಾಂತ ಬಿರಾದಾರ ಹಾಗೂ ಪಿಎಸ್ ಐ ಸಂಗೀತಾ ಶಿಂಧೆ ಸ್ಥಳಕ್ಕೆ ದೌಡಾಯಿಸಿ ಜಮೀನು ಕಳೆದುಕೊಂಡ ರೈತರ ಮನವೊಲಿಸಿ ಗ್ರಾಮಸ್ಥರ ಸಮ್ಮುಖದಲ್ಲಿ ಜೆಸಿಬಿ ಮತ್ತು ಟ್ರಾಕ್ಟರ್ ಮೂಲಕ ಮುರಮ್ ರಸ್ತೆ ಕೆಲಸವನ್ನು ಪ್ರಾರಂಭಿಸಲು ಸಾಧ್ಯವಾದದ್ದು “ಸಂಜೆವಾಣಿ” ವರದಿ ಇಂಪ್ಯಾಕ್ಟ್.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಹಾಗೂ ಯುವಕರು ಹಾಜರಿದ್ದರು.
ಪ್ರವಾಹದಿಂದ ಉಂಟಾದ ಚಿನಮಳ್ಳಿ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿತು. ಕೆಬಿಜಿಎನ್‍ಎಲ್ ಅಧಿಕಾರಿಗಳ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹ ಇಳಿದ ತಕ್ಷಣವೇ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದು ಹೇಳಿರುವೆ. ನೀರಿನಿಂದ ರೈತರ ಜಮೀನು ಕೊಚ್ಚಿಕೊಂಡು ಹೋಗಿರುವುದರಿಂದ ರಸ್ತೆ ಕಾಮಗಾರಿ ಮಾಡಲು ಒಪ್ಪಿರಲಿಲ್ಲ. ಒಂದು ವಾರದೊಳಗೆ ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಕರೆಯಲಾಗುತ್ತದೆ. ಅಲ್ಲಿಯವರೆಗೂ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಓಡಾಡಲು ಅನುಕೂಲವಾಗುವಂತೆ ತಾತ್ಕಾಲಿಕ ಮುರಮ್ ರಸ್ತೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಸಹ ನಿನ್ನೆ ಸಾಯಂಕಾಲ ಕೆಲಸ ಪ್ರಾರಂಭ ಮಾಡಿದ್ದಾರೆ. ಬಹುಶಃ ಇಂದು ಪೂರ್ಣಗೊಳಿಸುತ್ತಾರೆ. ಶಾಲಾ ಮಕ್ಕಳು ನಡೆದುಕೊಂಡು ಬ್ರಿಡ್ಜ್ ದಾಟುವ ಫೋಟೋ ಜೊತೆಗೆ ಮುಂದೆ ಆಗುವ ಅನಾಹುತ ಬಗ್ಗೆ “ಸಂಜೆವಾಣಿ” ಪತ್ರಿಕೆ ಸುದ್ದಿ ಬಿತ್ತರಿಸಿ ನಮ್ಮ ಗಮನಕ್ಕೆ ತಂದಿರುವುದು ಶ್ಲಾಘನೀಯ.
-ಎಂ.ವೈ.ಪಾಟೀಲ
ಶಾಸಕರು, ಅಫಜಲಪುರ.





























