ಬಜೆಟ್‌ನಲ್ಲಿ ಕರ್ತವ್ಯ ಮಂತ್ರ ಪಠಣೆ

ನವದೆಹಲಿ, ಫೆ. ೧- ದೇಶದ ಎಲ್ಲಾ ವರ್ಗಗಳ ಅಭಿವೃದ್ಧಿಯ ಬಜೆಟ್‌ನ್ನು ಮಂಡಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರ್ಥಿಕ ಪ್ರಗತಿ, ಜನರ ನಿರೀಕ್ಷೆ ಈಡೇರಿಕೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಈ ಮೂರು ಕರ್ತವ್ಯಗಳನ್ನು ಬಜೆಟ್‌ನಲ್ಲಿ ಪಠಿಸಿದ್ದಾರೆ.


ಲೋಕಸಭೆಯಲ್ಲಿಂದು ದಾಖಲೆಯ ೯ನೇ ಬಜೆಟ್‌ನ್ನು ಮಂಡಿಸಿದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು, ಸರ್ವ ವರ್ಗಗಳ ಅಭಿವೃದ್ಧಿಯ ಜತೆ ಜತೆಗೆ ಕೈಗಾರಿಕಾ ಬೆಳವಣಿಗೆ, ಮೂಲ ಸೌಕರ್ಯಕ್ಕೆ ಒತ್ತು ನೀಡುವ, ಉತ್ಪಾದಕ ವಲಯದ ಬೆಳವಣಿಗೆಗೆ ಪೂರಕವಾಗಿ ಜತೆಗೆ ಯುವ ಜನರನ್ನು ಸಬಲೀಕರಣ, ರೈತರು, ಮಹಿಳೆಯರ ಬಲಿಷ್ಠಗೊಳಿಸುವ ಹತ್ತು ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.


ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಈ ಬಜೆಟ್‌ನಲ್ಲಿ ೫ ಪ್ರಮುಖ ಘಟಕಗಳ ಸಮಗ್ರ ಯೋಜನೆಯನ್ನು ಪ್ರಕಟಿಸಿದ್ದು, ಕಾರ್ಮಿಕ, ಜವಳಿ ವಲಯ ಉತ್ತೇಜಿಸಲು ಹೊಸ ಯೋಜನೆ, ರಾಷ್ಟ್ರೀಯ ನಾರು ಯೋಜನೆ, ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ, ಖಾದಿ ಮತ್ತು ಕರಕುಶಲ ವಸ್ತುಗಳಿಗಾಗಿ ಹೊಸ ಯೋಜನೆ, ಮಹಾತ್ಮಗಾಂಧಿ ಗ್ರಾಮ ಸ್ವರಾಜ್ ಯೋಜನೆ, ರಾಷ್ಟ್ರೀಯ ಕೈಮಗ್ಗ ಮತ್ತು ಕರಕುಶಲ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.


ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಭಾರತದ ಅಭಿವೃದ್ಧಿಗೆ ೬ ವಲಯಗಳ ಪ್ರಗತಿಯನ್ನು ಪ್ರತಿಪಾದಿಸಿದ್ದು, ಉತ್ಪಾದನಾ ವಲಯದ ಬಲಪಡಿಸುವಿಕೆ, ಕೈಗಾರಿಕಾ ವೈಭವದ ಪುನರುಜ್ಜೀವನ, ಚಾಂಪಿಯನ್ ಎಂಎಸ್‌ಎಂಇ ಸೃಷ್ಠಿ, ಮೂಲಭೂತ ಸೌಕರ್ಯಗಳಿಗೆ ಒತ್ತು, ದೀರ್ಘಕಾಲದ ಬದ್ಧತೆ ಮತ್ತು ಸ್ಥಿರತೆಗೆ ಆದ್ಯತೆ, ನಗರಗಳ ಆರ್ಥಿಕ ಅಭಿವೃದ್ಧಿ ಹೀಗೆ ೬ ವಲಯಗಳ ಅಭಿವೃದ್ಧಿಗೆ ತಮ್ಮ ಬಜೆಟ್‌ನಲ್ಲಿ ಒತ್ತು ನೀಡಿದ್ದಾರೆ.


ಬಜೆಟ್‌ನ ಆರಂಭದಲ್ಲೇ ಇದು ಯುವ ಶಕ್ತಿಯ ಬಜೆಟ್ ಹಾಗೂ ಬಡವರ ಕಲ್ಯಾಣ ಸಂಕಲ್ಪದ ಬಜೆಟ್ ಎಂದು ಹೇಳಿರುವ ಅವರು, ಈ ಸಂಕಲ್ಪವನ್ನು ನೆರವೇರಿಸಲು ಕರ್ತವ್ಯ ಭವನದಲ್ಲಿ ತಯಾರಿಸಲಾದ ಮೊದಲ ಬಜೆಟ್ ಮೂರು ಕರ್ತವ್ಯಗಳಿಂದ ಪ್ರೇರಿತಗೊಂಡಿದೆ ಎಂದಿದ್ದಾರೆ.
ಉತ್ಪಾದನೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಆರ್ಥಿಕ ಬೆಳವ

ಣಿಗೆಯನ್ನು ವೇಗಗೊಳಿಸುವುದು ಮತ್ತು ಉಳಿಸಿಕೊಳ್ಳುವುದು ನಮ್ಮ ಮೊದಲ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ಜನರ ಆಶೋತ್ತರಗಳನ್ನು ಈಡೇರಿಸುವುದು ಮತ್ತು ದೇಶದ ಅಭಿವೃದ್ಧಿಯಲ್ಲಿ ಬಲಿಷ್ಠ ಪಾಲುದಾರರಾಗುವಂತೆ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು ನಮ್ಮ ೨ನೇ ಕರ್ತವ್ಯ. ನಮ್ಮ ಮೂರನೇ ಕರ್ತವ್ಯ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಧಾರಿತವಾಗಿದ್ದು, ಪ್ರತಿ ಕುಟುಂಬ, ಸಮುದಾಯ, ಧರ್ಮ ಹಾಗೂ ವಿಭಾಗಗಳಿಗೆ ಸಂಪನ್ಮೂಲ ಬಳಕೆಗೆ ಅವಕಾಶ ನೀಡುವುದಾಗಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ಹೇಳಿದರು.


ಮಾಘಮಾಸದ ಹುಣ್ಣಿಮೆ ಹಾಗೂ ಗುರು ರವಿದಾಸ್ ಜನ್ಮದಿನದ ಪುಣ್ಯದಿನದಂದು ಕೇಂದ್ರದ ಬಜೆಟ್‌ನ್ನು ನಾನು ಮಂಡಿಸಿದ್ದೇನೆ. ೧೨ ವರ್ಷಗಳಿಂದ ದೇಶದಲ್ಲಿ ಆರ್ಥಿಕ ಸ್ಥಿರತೆ ಸಾಧನೆಯಾಗಿದ್ದು, ಹಣಕಾಸು ಶಿಸ್ತು ಹಾಗೂ ನಿರಂತರ ಪ್ರಗತಿ ಸಾಧಿಸಿದ್ದೇವೆ. ಅನಿಶ್ಚಿತತೆಗಳ ನಡುವೆಯೂ ಪ್ರಗತಿ ಸಾಧಿಸಿದ್ದೇವೆ ಎಂದರು.
ಸರ್ವರ ಅಭಿವೃದ್ಧಿಯೊಂದಿಗೆ ವಿಕಸಿತ ಭಾರತದತ್ತ ಹೆಜ್ಜೆ ಇಡುವುದು ಮುಂದುವರೆಯಲಿದೆ ಎಂದು ಅವರು ಹೇಳಿದರು.


ಇಂದು ತಾವು ಮಂಡಿಸುತ್ತಿರುವ ಬಜೆಟ್ ಯುವಜನರ ಬಜೆಟ್ ಆಗಿದೆ. ಯುವ ಜನರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ನಮ್ಮ ಬದ್ಧತೆಯಾಗಿದೆ ಎಂದು ಅವರು ತಿಳಿಸಿದರು.
ಈ ಬಜೆಟ್‌ನಲ್ಲಿ ರೈಲ್ವೆ ಅಭಿವೃದ್ಧಿಯ ಘೋಷಣೆಯನ್ನು ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರು ಸೇರಿದಂತೆ ೭ ಹೈಸ್ಪೀಡ್ ರೈಲುಗಳನ್ನು ಘೋಷಿಸಿದ್ದಾರೆ.


ಇಂಧನ, ಹಣಕಾಸು ನಿಗಮ ಹಾಗೂ ಗ್ರಾಮೀಣ ವಿದ್ಯುದ್ದೀಕರಣ ಪುನಾರಚನೆಯ ಘೋಷಣೆಯನ್ನು ಮಾಡಿದ್ದು, ಮೆಡಿಕಲ್ ಹಬ್ ಘೋಷಣೆಯನ್ನು ಮಾಡಿದ್ದಾರೆ.
ದೇಶದಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಯ ಪ್ರಸ್ತಾವವನ್ನು ಅವರು ಮಾಡಿದ್ದು, ೨೦೦ ಪ್ರಮುಖ ಕೈಗಾರಿಕಾ ಕ್ಲಸ್ಟರ್‌ಗಳ ನವೀಕರಣ ಘೋಷಣೆಯನ್ನು ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಮಾಡಿದ್ದಾರೆ.


ಭಾರತವನ್ನು ಜಾಗತಿಕ ಬಯೋ ಫಾರ್ಮ ಉತ್ಪಾದನಾ ಕೇಂದ್ರವನ್ನಾಗಿ ಮಾರ್ಪಡಿಸಲಾಗುವುದು. ಅದಕ್ಕಾಗಿ ಮುಂದಿನ ೫ ವರ್ಷದಲ್ಲಿ ೧೦ ಸಾವಿರ ಕೋಟಿ ರೂ. ಬಯೋ ಫಾರ್ಮ ಶಕ್ತಿ ಯೋಜನೆಯನ್ನು ಅವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.


ವೈಯುಕ್ತಿಕ ಆದಾಯ ತೆರಿಗೆಯಲ್ಲಿ ಈ ಬಜೆಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ವಿದೇಶ ಪ್ರವಾಸ, ವಿದೇಶದಲ್ಲಿ ಶಿಕ್ಷಣ, ಚಿಕಿತ್ಸೆ ಹಗ್ಗವಾಗಲಿದೆ.
ಈ ಬಜೆಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕೂ ಒತ್ತು ನೀಡಲಾಗಿದ್ದು, ದೇಶದ ಪ್ರತಿ ಜಿಲ್ಲೆಯಲ್ಲಿ ಬಾಲಕಿಯರ ಹಾಸ್ಟೆಲ್ ಸ್ಥಾಪನೆಯ ಘೋಷಣೆ ಮಾಡಲಾಗಿದೆ.
ರಕ್ಷಣಾ ವಲಯಕ್ಕೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ.


ಈ ಬಜೆಟ್‌ನಲ್ಲಿ ಚರ್ಮದ ಆಮದು ಸುಂಕ ಇಳಿಕೆ ಮಾಡಲಾಗಿದ್ದು, ಪಾದರಕ್ಷಣೆಗಳು ಹಾಗೂ ಚರ್ಮದ ಉತ್ಪನ್ನಗಳ ಬೆಲೆ ಇಳಿಕೆಯಾಗಲಿದೆ. ಹಾಗೆಯೇ ಕ್ಯಾನ್ಸರ್ ಔಷಧಿಗಳಿಗೂ ಶುಲ್ಕ ವಿನಾಯ್ತಿ ಘೋಷಿಸಲಾಗಿದೆ.


ವೈಯುಕ್ತಿಕ ಬಳಕೆಗೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಸುಂಕವನ್ನು ಶೇ. ೨೦ ರಿಂದ ೧೦ಕ್ಕೆ ಇಳಿಸಲಾಗಿದೆ.


ಮೇಕಿನ್ ಇಂಡಿಯಾ ಅಡಿ ತಯಾರಾಗುವ ಎಲೆಕ್ಟ್ರಾನಿಕ್ ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್‌ಗಳು ಹಗ್ಗವಾಗಲಿವೆ. ಬೀಡಿ ಮತ್ತು ಬ್ಯಾಟರಿಗಳ ಬೆಲೆಯೂ ಇಳಿಕೆಯಾಗಲಿದೆ. ಸಿಗರೇಟ್, ಪಾನ ಮಸಾಲ, ವಿದೇಶದಿಂದ ಆಮದು ಆಗುವ ಮದ್ಯ, ಲಕ್ಸುರಿ ವಾಚ್‌ಗಳು ಮತ್ತು ವಿಮಾನ ಬಿಡಿ ಭಾಗಗಳ ಮೇಲಿನ ಶುಲ್ಕ ಹೆಚ್ಚಳ ಮಾಡಿದ್ದು, ಇವುಗಳ ಬೆಲೆ ಏರಿಕೆಯಾಗಲಿದೆ.


ಲೋಕಸಭೆಯಲ್ಲಿ ಬಜೆಟ್ ಭಾಷಣವನ್ನು ಓದಲು ನಿರ್ಮಲ ಸೀತಾರಾಮನ್ ಅವರು ೧ ಗಂಟೆ ೨೫ ನಿಮಿಷ ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ೧೫ನೇ ಬಜೆಟ್ ಇದಾಗಿದ್ದು, ನಿರ್ಮಲಾ ಸೀತರಾಮನ್ ಅವರು ಸತತವಾಗಿ ಮಂಡಿಸಿದ ೯ನೇ ಬಜೆಟ್ ಇದಾಗಿದೆ.

ಹಣಕಾಸು ಕೊರತೆ ಶೇ. ೪.೪೩ ರಷ್ಟು


೨೦೨೫-೨೬ರ ಪರಿಷ್ಕೃತ ಅಂದಾಜಿನಲ್ಲಿ ಹಣಕಾಸಿನ ಕೊರತೆಯೂ ಜಿಡಿಪಿಯ ಶೇ. ೪.೪೪ ರಷ್ಟಿದೆ. ೨೦೨೬-೨೭ಕ್ಕೆ ಇದನ್ನು ಶೇ. ೪.೪೩ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ನಿರ್ಮಲಾ ಸೀತರಾಮನ್ ಅವರು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.


೧೬ನೇ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂದ ಪ್ರಕಟಿಸಿರುವ ಅವರು, ಶೇ. ೪೧ ರಷ್ಟು ತೆರಿಗೆ ವಿಕೇಂದ್ರೀಕರಣ ಸೂತ್ರವನ್ನು ಉಳಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.


ಕಳೆದ ೧೦ ವರ್ಷಗಳಲ್ಲಿ ಸುಮಾರು ೨೫ ಕೋಟಿ ಜನ ಬಡತನದಿಂದ ಹೊರ ಬಂದಿದ್ದಾರೆ ಎಂದು ಅವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.