ಉಚಿತ ಕಂಪ್ಯೂಟರ್ ತರಬೇತಿ ಪಡೆದ ಕೈದಿಗಳಿಗೆ ಪ್ರಮಾಣ ಪತ್ರ ವಿತರಣೆ

ಕಲಬುರಗಿ,ಫೆ.24-ನಗರ ಹೊರವಲಯದ ಕೇಂದ್ರ ಕಾರಾಗೃಹದದಲ್ಲಿ ಸೋಮವಾರ ಉಚಿತ ಕಂಪ್ಯೂಟರ್ ತರಬೇತಿ ಪಡೆದಿರುವ ಕೈದಿಗಳಿಗೆ ಪ್ರಮಾಣ ಪತ್ರ ಮತ್ತು ನೂತನ ತರಬೇತಿದಾರರಿಗೆ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಾರ್ಮಲ್ ಜ್ಯೋತಿ, ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್‍ನ ಕಡಗಂಚಿ ಶಾಖೆಯ ಕಾರ್ಯದರ್ಶಿ ಫಾದರ್ ವಿಲಿಯಂ ಮಿರಿಂಡಾ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕೈದಿಗಳ ಜೀವನ ಸುಧಾರಣೆಗೋಸ್ಕರ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತಿದ್ದು, ಇದು ನಿಮ್ಮ ಜೀವನಕ್ಕೆ ಒಂದು ಅಡಿಪಾಯ ಸಿಕ್ಕಂತೆ ಆಗುತ್ತದೆ. ಅಲ್ಲದೇ ನಿಮ್ಮ ಜೀವನವು ಹಸಿರುಮಯವಾಗಿ ಮುಂದಿನ ಬದುಕಿಗೆ ದಾರಿ ದೀಪವಾಗುತ್ತದೆಂದು ಎಂದು ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ ಅದಾನಿ ಗ್ರೂಪ್‍ನ ಸಂಯೋಜಕ ಅಶೋಕ ಬಿ ಹಾಲವಿ ಅವರು ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಕಂಪ್ಯೂಟರ್ ಶಿಕ್ಷಣ ಮಹತ್ವದಾಗಿದೆ. ಹಾಗಾಗಿ ಇಲ್ಲಿ ನೀಡುವ
ತರಬೇತಿಯನ್ನು ಪಡೆದು ಉತ್ತಮ ಶಿಕ್ಷಣವನ್ನು ಪಡೆದು ಅದು ನಿಂತ ನೀರಾಗದೇ ಸದಾ ಹರಿಯುವ ನೀರು ಆಗಲಿ ಎಂದು ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರು, ಪ್ರಮಾಣ ಪತ್ರ ಹಾಗೂ ಕಿಟ್ ವಿತರಿಸಿ ಮಾತನಾಡುತ್ತಾ, ಕಾರಾಗೃಹದಲ್ಲಿರುವ ಎಲ್ಲಾ ಬಂದಿಗಳು ಸರದಿ ಪ್ರಕಾರವಾಗಿ ಕಂಪ್ಯೂಟರ್ ಶಿಕ್ಷಣ ನೀಡುವುದರ ಜೊತೆಗೆ ವಿವಿಧ ಕೌಶಲ್ಯಾಧಾರಿತ ತರಬೇತಿಗಳನ್ನು ಸಹ ನೀಡಲಾಗುತ್ತದೆ. ಪ್ರತಿಯೊಬ್ಬ ಬಂಧಿಯು ವೃತ್ತಪರ ತರಬೇತಿಗಳನ್ನು ಪಡೆದು ಹಾಗೂ ತರಬೇತಿ ಪಡೆದಿರುವ ಬಂಧಿಗಳಿಗೆ ವಿಶೇಷ ಮಾಫಿಯನ್ನು ನೀಡಲಾಗುವುದು ಅದರ ಉಪಯೋಗ ಪಡೆದುಕೊಂಡು ಈ ಕಾರಾಗೃಹದಿಂದ ಬಿಡುಗಡೆ ಹೊಂದಿ ಸಮಾಜದೊಂದಿಗೆ ಬೆರೆತು ಈ ಕಾರಾಗೃಹದಲ್ಲಿ ಪಡೆದಂತಹ ತರಬೇತಿಗಳನ್ನು ಅಳವಡಿಸಿಕೊಂಡು ತಮ್ಮ ಕುಟುಂಬ ಮತ್ತು ಸಮಾಜಕ್ಕೆ ಒಬ್ಬ ಒಳ್ಳೆಯ ನಾಗರೀಕನಾಗಿ ಬಾಳುವೆ ನಡಸಿ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕೆಂದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ 30 ಜನ ತರಬೇತಿ ಪಡೆದ ಪ್ರಶೀಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ 30 ಜನ ನೂತನ ಪ್ರಶೀಕ್ಷಣಾರ್ಥಿಗಳಿಗೆ ಕಿಟ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬಳೆ, ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಚನ್ನಪ್ಪ ಯಟಗ್‍ಲ್ ಹಾಗೂ ಕಂಪ್ಯೂಟರ್ ಶಿಕ್ಷಕ ಹರೀಶ್ ದತ್ತಾತ್ರೇಯ ಗೌಳಿ ಹಾಜರಿದ್ದರು.
ಕಾರಾಗೃಹದ ಶಿಕ್ಷಕರಾದ ನಾಗರಾಜ ಮೂಲಗೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ ವಂದಿಸಿದರು.