
ಕರ್ನೂಲ್: ಉಪನಗರ ಚಿನ್ನಟೇಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ೪೪ ರಲ್ಲಿ ನಿನ್ನೆ ಮುಂಜಾನೆ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ೨೦ ಪ್ರಯಾಣಿಕರು ಸಾವನ್ನಪ್ಪಿದ ಸಂಬಂಧ ಬಸ್ಸಿನ ಇಬ್ಬರು ಚಾಲಕರನ್ನು ಪೊಲೀಸರು ಬಂಧಿಸಿ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆ ಇನ್ನಿತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದಾರೆ.
ಬಸ್ ಅಗ್ನಿ ದುರಂತದಲ್ಲಿ ಬದುಕುಳಿದ ಪ್ರಯಾಣಿಕ ಎನ್ ರಮೇಶ್ ನೀಡಿದ ದೂರು ಆಧರಿಸಿ ಕರ್ನೂಲ್ ಜಿಲ್ಲೆಯ ಉಲಿಂದಕೊಂಡ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಬಳಿಕ ಇಡೀ ಬಸ್ ಸುಟ್ಟು ಕರಲಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ೨೦ ಜನ ಸಜೀವ ದಹನವಾಗಿದ್ದಾರೆ. ಬಸ್ಸಿನಲ್ಲಿದ್ದ ಕೆಲ ಪ್ರಯಾಣಿಕರು ಮತ್ತು ಚಾಲಕರು ಅಪಾಯದಿಂದ ಪಾರಾಗಿದ್ದಾರೆ.
“ಕರ್ನೂಲ್ ಬಸ್ ಅವಘಡ ಸಂದರ್ಭದಲ್ಲಿ ನಿರ್ಲಕ್ಷ್ಯ ಮತ್ತು ಅತಿ ವೇಗದ ಚಾಲನೆ ಆರೋಪದ ಮೇಲೆ ಪ್ರಯಾಣಿಕ ಎನ್ ರಮೇಶ್ ಅವರ ದೂರಿನ ಆಧಾರದ ಮೇಲೆ ಇಬ್ಬರು ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತರಲ್ಲಿ ಇಬ್ಬರು ಮಕ್ಕಳು ಮತ್ತು ಬೈಕ್ ಸವಾರ ಸೇರಿದ್ದಾರೆ. ಒಂಬತ್ತು ಜನರು ಗಾಯಗೊಂಡಿದ್ದಾರೆ. ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ೪೪ ಪ್ರಯಾಣಿಕರಿದ್ದರು. ಗುರುತಿಸಲಾಗದಷ್ಟು ಪ್ರಯಾಣಿಕರು ಸುಟ್ಟುಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಡಿ ೦೧ ಎನ್ ೯೪೯೦ ನೋಂದಾಯಿತ ಸಂಖ್ಯೆಯ ವಿ ಕಾವೇರಿ ಟ್ರಾವೆಲ್ಸ್ ಬಸ್‌ನಲ್ಲಿ ಸುಮಾರು ೪೦ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ವೋಲ್ವೋ ಬಸ್ ೨+೧ ಮಲ್ಟಿ ಆಕ್ಸಲ್ ಸ್ಲೀಪರ್ ಎಸಿ ಆಗಿದ್ದು, ೪೨ ಆಸನಗಳ ಸಾಮರ್ಥ್ಯ ಹೊಂದಿದೆ. ಇದು ಹೈದರಾಬಾದ್‌ನಿಂದ ಬಂದು ಬೆಂಗಳೂರಿಗೆ ಹೋಗುತ್ತಿತ್ತು. ಅಕ್ಟೋಬರ್ ೨೩ ರಂದು ರಾತ್ರಿ ಹೈದರಾಬಾದ್‌ನ ಎಲ್‌ಬಿ ಕ್ರೀಡಾಂಗಣದ ಬಳಿ ನಾನು ಬಸ್ ಹತ್ತಿದ್ದೆ. ಕರ್ನೂಲ್ ದಾಟಿದ ನಂತರ ಬೆಳಗ್ಗೆ ಬಸ್‌ನ ಮುಂಭಾಗದಲ್ಲಿ ದೊಡ್ಡ ಶಬ್ದ ಕೇಳಿಸಿತು ಮತ್ತು ಬೆಂಕಿ ಕಾಣಿಸಿಕೊಂಡಿತು ಎಂದು ರಮೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಹಿಂಭಾಗದ ಗಾಜನ್ನು ಒಡೆದು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಹೊರಬಂದೆವು. ಕೈಗೆ ಗಾಯವಾಯಿತು, ಆದರೆ ನಮ್ಮ ಕುಟುಂಬ ಸ್ನೇಹಿತ ಜಿ ರಮೇಶ್ ಸೇರಿದಂತೆ ಹಲವರು ಭಾರೀ ಹೊಗೆ ಮತ್ತು ಬೆಂಕಿಯಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದರು. ಬಸ್‌ನ ಮುಂಭಾಗದ ಕೆಳಗೆ ಮೋಟಾರ್ ಸೈಕಲ್ ಸಿಲುಕಿಕೊಂಡಿರುವುದು ಕಂಡುಬಂದಿದೆ. ಬಸ್ ಅತಿ ವೇಗದಲ್ಲಿ ಬೈಕಿಗೆ ಡಿಕ್ಕಿ ಹೊಡೆದು ಸುಮಾರು ೨೦೦ ಮೀಟರ್‌ಗಳಷ್ಟು ಎಳೆದೊಯ್ದಿದೆ ಎಂದು ಸ್ಥಳೀಯರು ನನಗೆ ತಿಳಿಸಿದರು. ಇದರಿಂದಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ದೂರಿನಲ್ಲಿ ರಮೇಶ್ ಉಲ್ಲೇಖಿಸಿದ್ದಾರೆ.
“ಚಾಲಕರ ವಿರುದ್ಧ ಬಿಎನ್‌ಎಸ್ ಕಾಯ್ದೆಯ ಸೆಕ್ಷನ್ ೧೨೫(ಎ) (ಮಾನವ ಜೀವಕ್ಕೆ ಅಪಾಯ ಮಾಡುವುದು), ೧೦೬(೧) (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಉಲಿಂದಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ” ಎಂದು ಕರ್ನೂಲ್ ಎಸ್ಪಿ ವಿಕ್ರಾಂತ್ ಪಟೇಲ್ ಮಾಹಿತಿ ನೀಡಿದ್ದಾರೆ.






























