
ಕಲಬುರಗಿ,ಫೆ.11-ಮದುವೆ ಸಮಾರಂಭದ ನಿಮಿತ್ಯ ನಡೆದ ಹಳದಿ ಕಾರ್ಯಕ್ರಮದಲ್ಲಿ ಕೈಯಲ್ಲಿ ಪರವಾನಿಗೆ ಹೊಂದಿರುವ ಪಿಸ್ತೂಲ್ ಹಾಗೂ ಟಾಯ್ ಸ್ಟನ್ ಗನ್ ಹಿಡಿದುಕೊಂಡು ನೃತ್ಯ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ನಗರದ ಚೌಕ್ ಪೊಲೀಸ್ ಠಾಣೆಯಲ್ಲಿ ಕಲಂ 30 ಆಮ್ರ್ಸ್ ಆಕ್ಟ್ ಅಡಿಯಲ್ಲಿ ಸ್ವಯಂ ಪ್ರೇರಿತ (ಸುಮೋಟೊ) ಪ್ರಕರಣ ದಾಖಲಾಗಿದೆ.
ಕಲಬುರಗಿಯ ತಾಜ್ ನಗರ ಬಡಾವಣೆಯಲ್ಲಿರವ ಹೋಟೆಲ್‍ನಲ್ಲಿ ಜ.18 ರಂದು ರಾತ್ರಿ ನಡೆದ ತಮ್ಮ ಸಹೋದರಿಯ ಪುತ್ರಿಯ ಮದುವೆ ಸಮಾರಂಭದ ನಿಮಿತ್ಯ ನಡೆದ ಹಳದಿ ಕಾರ್ಯಕ್ರಮದಲ್ಲಿ ಮತೀನ್ ಪಟೇಲ್ ಅವರು ಕೈಯಲ್ಲಿ ಪಿಸ್ತೂಲ್ ಹಾಗೂ ಟಾಯ್ ಸ್ಟನ್ ಗನ್ ಹಿಡಿದು ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಈ ಹಿನ್ನೆಲೆಯಲ್ಲಿ ಮತೀನ್ ಪಟೇಲ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಸಾರ್ವಜನಿಕರಿಗೆ ಭಯ, ಭೀತಿ ಉಂಟಾಗುವ ರೀತಿಯಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಯಾವುದೇ ರೀತಿಯ ಪೋಸ್ಟ್‍ಗಳನ್ನು ಹಂಚಿಕೊಳ್ಳಬಾರದು. ಇಂತಹ ಪೋಸ್ಟ್‍ಗಳನ್ನು ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.





















