
ಬಿವೈವಿ ಭವಿಷ್ಯ
ದಾವಣಗೆರೆ, ಮಾ. ೨೯- ರಾಜ್ಯದಲ್ಲಿ ಇದೀಗ ನಡೆಯುತ್ತಿರುವ ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಇಡೀ ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.
ನಗರದ ಕೆ.ಬಿ.ಬಡಾವಣೆಯಲ್ಲಿನ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡು ಚುನಾವಣಾಗಳ ಫಲಿತಾಂಶ ಭಾರತೀಯ ಜನತಾ ಪಕ್ಷಕ್ಕೆ ಶಕ್ತಿಯಾಗಿ ಮಾರ್ಪಡಲಿದೆ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದು ಇದರೊಂದಿಗೆ ಉಭಯ ಕ್ಷೇತ್ರಗಳ ಅಭಿವೃದ್ಧಿ ಕೂಡ ಆಗಲಿದೆ ಎಂದು ಮಾಹಿತಿ ನೀಡಿದರು.
ದಾವಣಗೆರೆ ದಕ್ಷಿಣ ಜನತೆ ಕ್ಷೇತ್ರದಲ್ಲಿ ಬದಲಾವಣೆ ಬಯಸುತ್ತಿದ್ದು ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಐತಿಹಾಸಿಕ ಗೆಲುವು ಸಿಗಲಿದೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಗಳು ಇಡೀ ರಾಜ್ಯದ ಜನತೆಗೆ ನೂತನ ಸಂದೇಶ ನೀಡಲಿದೆ ಎಂದರು.
ರಾಜ್ಯದಲ್ಲಿ ಈವರೆಗೆ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಕೇವಲ ಮತದಾರನಾಗಿ ಉಪಯೋಗಿಸಲು ಬಳಸುತ್ತಿತ್ತು. ಇದೀಗ ಅಲ್ಪ ಸಂಖ್ಯಾತರಿಗೆ ಅದು ಅರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಪ ಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನತೆ ಈ ಬಾರಿ ಉಭಯ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಉಪಚುನಾವಣೆಗೆ ಸಂಬಂಧಪಟ್ಟಂತೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಸೇರಿದಂತೆ ಘಟಾನುಘಟಿ ನಾಯಕರು ಪ್ರಚಾರಕ್ಕೆ ಇಳಿಯಲಿದಿದ್ದಾರೆ. ಇದರಿಂದಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹಾಗೂ ಬಲ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.
೧೭ ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವುದಾಗಿ ಹೇಳಿರುವ ಸಿಎಂ. ಇವರ ಬಜೆಟ್ ನಿಂದ ರಾಜ್ಯದ ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಿಲ್ಲ.
೨೦೪೦ರ ವೇಳೆಗೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುವ ಘೋಷಣೆಯೊಂದಿಗೆ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ಜಾತಿ ಜನಾಂಗವನ್ನು ಒಗ್ಗಟ್ಟಿನಿಂದ ಕರೆದುಕೊಂಡು ಈ ದೇಶವನ್ನು ವಿಕಸಿತ ಭಾರತ ಮಾಡಲು ಹೊರಟಿರುವ ಮೋದಿ ಅವರ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಿಂದಿನ ಬಿಜೆಪಿ ಆಡಳಿತದಲ್ಲಿ ದಾವಣಗೆರೆಯಲ್ಲಿ ಆಗಿದ್ದ ಅಭಿವೃದ್ಧಿಗಳೇ ಮಾತ್ರ ಈಗ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದ ಅವರು, ಯಾವುದೇ ಬೇಜವಾಬ್ದಾರಿ ಹೇಳಿಕೆಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಂಚ ರಾಜ್ಯಗಳ ಚುನಾವಣೆ ನಂತರ ಸಿದ್ದರಾಮಯ್ಯ ಅನಿವಾರ್ಯವಾಗಿ ಕಾಂಗ್ರೆಸ್ ಹೈ ಕಮಾಂಡ್ ಮಾತು ಕೇಳುವ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಮಾಜಿ ಸಂಸದ ಡಾ.ಜಿ.ಎಂ. ಸಿದ್ದೇಶ್ವರ, ಶಿವನಗೌಡ ನಾಯಕ್, ಎಸ್.ವಿ.ರಾಮಚಂದ್ರ, ಹೆಚ್.ಪಿ.ವಿಶ್ವಾಸ್ ಇತರರು ಇದ್ದರು.





























