
ಮಂಗಳೂರು,ಸೆ.೫-ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ಸಂಬಂಧ ಒಂದೊಂದೇ ಅಂಶಗಳು ಬಯಲಿಗೆ ಬರುತ್ತಿವೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಚಿನ್ನಯ್ಯ ತಂದಿದ್ದ ಬುರುಡೆ ರಹಸ್ಯ ಬಹಿರಂಗವಾಗಿದೆ.
ಬಂಗ್ಲೆಗುಡ್ಡದಿಂದ ಈ ಬುರುಡೆ ತರಲಾಗಿದೆ ಎಂದು ತಿಮರೋಡಿ ಆಪ್ತ ಜಯಂತ್ ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದರು. ಕಾಡಿನಲ್ಲೇ ಈ ವೀಡಿಯೊ ಶೂಟ್ ಮಾಡಿ ಅಪ್‌ಲೋಡ್ ಮಾಡಲಾಗಿತ್ತು. ಈ ಎಲ್ಲ ದೃಶ್ಯಗಳನ್ನು ಚಿತ್ರೀಕರಿಸಿದ್ದ ವೀಡಿಯೊವನ್ನು ಮನಾಫ್ ತನ್ನ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಅಂಶವೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕೇರಳದ ಯು ಟೂಬರ್ ಮನಾಫ್‌ಗೆ ಎಸ್‌ಐಟಿ ನೋಟಿಸ್ ನೀಡಿದೆ.
ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ, ತಮಿಳುನಾಡು,ಬೆಂಗಳೂರು ಬಳಿಕ ಈಗ ಕೇರಳದ ಸಂಪರ್ಕವೂ ಎಸ್‌ಐಟಿ ತನಿಖೆ ವೇಳೆ ಬಹಿರಂಗವಾಗಿದೆ.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮತ್ತು ಷಡ್ಯಂತ್ರ ಆರೋಪದ ಮೇಲೆ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಅಭಿಷೇಕ್‌ನನ್ನು ಎಸ್‌ಐಟಿ ವಿಚಾರಣೆ ನಡೆಸಿದಾಗ ಹಲವು ಮಾಹಿತಿಗಳು ಬೆಳಕಿಗೆ ಬಂದಿವೆ.
ಯಾರೀ ಮನಾಫ್:
೨೦೨೪ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ ೬೬ರ ಬದಿಯ ಗುಡ್ಡ ಕುಸಿದಿತ್ತು. ಈ ದುರಂತದಲ್ಲಿ ಬರೋಬ್ಬರಿ ೧೧ ಮಂದಿ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ಲಾರಿ ಚಾಲಕ ಅರ್ಜುನ್ ಮೃತಪಟ್ಟಿದ್ದ. ಈ ಮನಾಫ್ ಅದೇ ಲಾರಿಯ ಮಾಲೀಕ ಹಾಗೂ ಕೇರಳ ಭಾಗದ ಯೂಟ್ಯೂಬರ್ ಆಗಿದ್ದಾನೆ.
ಯೂಟ್ಯೂಬರ್ ಮನಾಫ್, ಬುರುಡೆ ಪ್ರಕರಣಕ್ಕೆ ಸಂಬಂಧ ಆರಂಭದಿಂದಲೂ ತನ್ನ ಯೂಟ್ಯೂಬ್‌ನಲ್ಲಿ ಕಥೆ ಕಟ್ಟಿದ್ದ. ಜಯಂತ್.ಟಿ ಮೂಲಕ ಬುರುಡೆ ಕಥೆಯನ್ನು ಕೇರಳಕ್ಕೂ ಹಬ್ಬಿಸಿದ್ದ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿ ಹೂಳಲಾಗಿದೆ ಎಂದು ಪ್ರಚಾರ ಮಾಡಿದ್ದನು.
ಕಾಡಿನಿಂದ ಬುರುಡೆ:
ಇನ್ನು ಕಾಡಿನಿಂದ ಬುರುಡೆ ತಂದಿರುವ ಒರಿಜಿನಲ್ ವಿಡಿಯೋ ಮನಾಫ್ ಯುಟ್ಯೂಬ್‌ನಲ್ಲಿ ಜುಲೈ ೧೧ ರಂದು ಅಪ್ಲೋಡ್ ಆಗಿತ್ತು. ಬಂಗ್ಲೆಗುಡ್ಡೆಯಿಂದಲೇ ಬುರುಡೆ ತಂದಿರುವುದಾಗಿ ಜಯಂತ್.ಟಿ ಹೇಳಿದ್ದಾರೆ. ಕಾಡು ಪ್ರದೇಶದಲ್ಲಿ ಶೂಟ್ ಮಾಡಿರುವ ವಿಡಿಯೋ ಇದಾಗಿದ್ದು, ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಪತ್ತೆಯಾಗಿರುವ ಬುರುಡೆಯನ್ನ ಕತ್ತಿ ಮೂಲಕ ಎತ್ತಿಕೊಂಡು ತಂದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆ ಮೂಲಕ ಧರ್ಮಸ್ಥಳ ಭಾಗದಿಂದಲೇ ಬುರುಡೆ ಎತ್ತಿಕೊಂಡು ಬಂದಿರುವ ಅನುಮಾನ ವ್ಯಕ್ತವಾಗಿತ್ತು.
ತಿಮರೋಡಿ ಮನೆಗೆ ಭೇಟಿ:
ಮನಾಫ್, ಪ್ರಕರಣ ಆರಂಭಕ್ಕೂ ಮೊದಲೇ ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಸುತ್ತಾಮುತ್ತಾ ಓಡಾಡಿದ್ದ. ಮಹೇಶ್ ತಿಮರೋಡಿ ಮನೆಗೂ ಭೇಟಿ ನೀಡಿ ಹೋರಾಟಕ್ಕೆ ಅಭಿನಂದನೆ ಸಲ್ಲಿಸಿದ್ದ.
ಒರಿಜಿನಲ್ ವಿಡಿಯೋ ಲಭ್ಯ:
ಎಸ್‌ಐಟಿ ಅಧಿಕಾರಿಗಳ ವಶದಲ್ಲಿರುವ ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿದು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿ. ಪ್ರಶ್ನೆ ಮಾಡಿ ಸುಸ್ತಾಗಿದ್ದರು. ಸದ್ಯ ಇದೀಗ ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿದು ಎನ್ನುವುದು ಗೊತ್ತಾಗಿದೆ.
ಚಿನ್ನಯ್ಯ ತಂದಿದ್ದ ಬುರುಡೆಯನ್ನ ಬಂಗ್ಲೆಗುಡ್ಡೆಯಿಂದ ತಂದಿರುವುದಾಗಿ ಜಯಂತ್ ಹೇಳಿದ್ದಾನೆ. ಅರಣ್ಯದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಇದ್ದ ಬುರುಡೆಯನ್ನು ತಂದಿದ್ದರು. ಕಾಡಿನಲ್ಲಿ ಒಂದು ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆ ಆಗಿದೆ. ಬುರುಡೆಯನ್ನು ಮೇಲೆತ್ತುಕೊಳ್ಳಬೇಕಾದರೆ ಕತ್ತಿಯನ್ನು ಬಳಕೆ ಮಾಡಿ ಅದನ್ನು ಚೀಲದಲ್ಲಿ ಹಾಕಿಕೊಳ್ಳಲಾಗಿದೆ. ಇದನ್ನು ತರಬೇಕಾದರೆ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.
ಯುಟ್ಯೂಬ್‌ನಲ್ಲಿ ಅಪ್ಲೋಡ್:
ಧರ್ಮಸ್ಥಳ ಭಾಗದಿಂದಲೇ ಬುರುಡೆ ಎತ್ತಿಕೊಂಡು ಬಂದಿರುವ ಅನುಮಾನ ಇದೆ. ಕಾಡಿನಿಂದ ಬುರುಡೆ ತಂದಿರುವ ಒರಿಜಿನಲ್ ವಿಡಿಯೋ ಲಭ್ಯ ಆಗಿದೆ. ಜುಲೈ ೧೧ ರಂದು ಯೂಟ್ಯೂಬರ್ ಕೇರಳದ ಮನಾಫ್ ಯುಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದರಲ್ಲಿಯೇ ಬುರುಡೆ ತಂದಿರುವುದು ಇದೆ.
ಹಣದ ಅಮಿಷ
ಧರ್ಮಸ್ಥಳದ ವಿರುದ್ದ ವಿಡಿಯೋ ಮಾಡಲು ಹಣದ ಆಮಿಷವೊಡ್ಡಿದ್ದರು ಎಂದು ಮಂಡ್ಯದ ಯೂಟ್ಯೂಬರ್ ಸುಮಂತ್ ಆರೋಪಿಸಿದ್ದಾರೆ. ಎರಡು ವರ್ಷದ ಹಿಂದಿನಿಂದ ಚಂದನ್ ಗೌಡ ಪರಿಚಯ ಇದೆ. ೫ ತಿಂಗಳ ಹಿಂದೆ ಚಂದನ್ ಅವರ ಬಟ್ಟೆ ಅಂಗಡಿ ಉದ್ಘಾಟನೆ ಇತ್ತು. ಅಲ್ಲಿಗೆ ಹೋಗಿದ್ದಾಗ ಯೂಟ್ಯೂಬರ್ ಅಭಿಷೇಕ್ (ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಿದ್ದ ಯೂಟ್ಯೂಬರ್. ಸದ್ಯ ಎಸ್‌ಐಟಿ ವಿಚಾರಣೆ ಎದುರಿಸುತ್ತಿದ್ದಾರೆ) ಬಂದಿದ್ದರು.
ಆ ಸಂದರ್ಭದಲ್ಲಿ ಅಭಿ ಅವರು ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡಲು ನನಗೂ ಹಣದ ಆಮಿಷವೊಡ್ಡಿದ್ದರು ಎಂದು ಸುಮಂತ್ ಹೇಳಿದ್ದಾರೆ. ಅಲ್ಲದೆ, ೪೦೦-೫೦೦ ಟ್ರೋಲ್ ಪೇಜಸ್, ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮಟ್ಟಣ್ಣವರ್ ನೇತೃತ್ವದಲ್ಲಿ ಏನೇನು ಷಡ್ಯಂತ್ರ ನಡೆದಿತ್ತು ಎಂದು ತಿಳಿಸಿದ್ದಾರೆ.