
ಬೆಂಗಳೂರು,ಏ.೩-ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳ ತಿದ್ದುಪಡಿ ಕುರಿತ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಸಾರ್ವಜನಿಕರಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.
ಈ ಕುರಿತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾಹಿತಿ ನೀಡಿ, ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ೩೦ ದಿನಗಳ ಒಳಗೆ ಸಂಬಂಧಿತ ಐದು ನಗರ ಪಾಲಿಕೆಗಳ ಆಯುಕ್ತರ ಕಚೇರಿಗಳಲ್ಲಿ ಸಾರ್ವಜನಿಕರು ತಮ್ಮ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಕಟ್ಟಡ ನಿರ್ಮಾಣದಾರರಿಗೆ ಇದು ಮಹತ್ವದ ಸಡಿಲಿಕೆಯಾಗಿದೆ.
ನಗರದಲ್ಲಿ ಭೂಮಿ ಬೆಲೆ ಏರಿಕೆ ಹಾಗೂ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಅನೇಕ ಕಟ್ಟಡಗಳು ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ನಿರ್ಮಾಣವಾಗಿರುವುದು ಕಂಡುಬಂದಿದೆ. ಪ್ರಸ್ತುತ ನಿಯಮಾನುಸಾರ ಶೇ. ೫ ರಷ್ಟು ಮಾತ್ರ ಉಲ್ಲಂಘನೆಗಳನ್ನು ಸಕ್ರಮಗೊಳಿಸಲು ಅವಕಾಶವಿದ್ದು, ಹೆಚ್ಚಿನ ಕಟ್ಟಡಗಳು ಈ ಮಿತಿಯನ್ನು ಮೀರಿ ಇರುವುದರಿಂದ ಸಮಸ್ಯೆ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಕಟ್ಟಡ ಉಪವಿಧಿ ೨೦೦೩ರ ಉಪವಿಧಿ ೬ಕ್ಕೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದ್ದು, ಉಲ್ಲಂಘನೆ ಮಿತಿಯನ್ನು ಶೇ. ೫ರಿಂದ ಶೇ. ೧೫ರವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಮಿತಿಯೊಳಗಿನ ಉಲ್ಲಂಘನೆಗಳಿಗೆ ದಂಡ ವಿಧಿಸಿ ಕ್ರಮಬದ್ಧಗೊಳಿಸುವ ಅವಕಾಶ ಕಲ್ಪಿಸಲಾಗುತ್ತದೆ.
ಈ ಕ್ರಮದಿಂದ ಅನೇಕ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಔಅ) ದೊರೆಯುವ ಸಾಧ್ಯತೆ ಇದ್ದು, ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯಲು ಸಹಾಯವಾಗಲಿದೆ. ಆದರೆ, ಈ ಮಿತಿಯಾಚೆಗಿನ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಸಾರ್ವಜನಿಕರ ಆರೋಗ್ಯ, ಸುರಕ್ಷತೆ ಹಾಗೂ ಗಾಳಿ-ಬೆಳಕು ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಈ ತಿದ್ದುಪಡಿ ರೂಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕರಡು ಉಪವಿಧಿಗಳ ಕುರಿತು ಸಲಹೆಗಳನ್ನು ಏಪ್ರಿಲ್ ೩೦ರೊಳಗೆ ಸಲ್ಲಿಸಲು ಸಾರ್ವಜನಿಕರನ್ನು ಕೋರಲಾಗಿದೆ. ಅಧಿಸೂಚನೆ ಪ್ರತಿಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ಸಲಹೆ ಸಲ್ಲಿಸಲು ಸ್ಥಳಗಳು:
ಬೆಂಗಳೂರು ಉತ್ತರ, ಕೇಂದ್ರ, ಪೂರ್ವ, ದಕ್ಷಿಣ ಹಾಗೂ ಪಶ್ಚಿಮ ನಗರ ಪಾಲಿಕೆ ಆಯುಕ್ತರ ಕಚೇರಿಗಳು.























