
ಕಲಬುರಗಿ,ಅ.25: ನರಿಬೋಳ ಚಾಮನೂರ ಸೇತುವೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದು,ಅರೆಬರೆ ಕೆಲಸ ಮಾಡಿ ಕಾಮಗಾರಿ ಬಿಲ್ ಪಡೆದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ,ಕೂಡಲೇ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್. ಪಾಟೀಲ ನರಿಬೋಳ ರಾಷ್ಟ್ರೀಯ ಹೆದ್ದಾರಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಒತ್ತಾಯಿಸಿದರು.
ಬ್ರಿಡ್ಜ್ ಕಾಮಗಾರಿ ವಿರುದ್ಧ ದೂರು ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಕಾರ್ಯನಿರ್ವಾಹಕ ಅಭಿಯಂತರರು ಈಗಾಗಲೇ ಗುತ್ತಿಗೆದಾರನ ಅಗ್ರಿಮೆಂಟ್ ರದ್ದುಪಡಿಸಿ,ಸುಮಾರು 6ಕೋಟಿ ರೂಪಾಯಿಗಳನ್ನು ದಂಡ ಹಾಕಿ ಬ್ಲಾಕ್ ಲಿಸ್ಟಿಗೆ ಹಾಕಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದು,ಈ ಕಾಮಗಾರಿ ಪ್ರಾರಂಭದ ಕುರಿತು 15ದಿನದಲ್ಲಿ ತಿಳಿಸಲಾಗುವುದು ಎಂದರು
ರಸ್ತೆಗಾಗಿ ಜಮೀನು ನೀಡಿರುವ ರೈತರಿಗೆ ಶೀಘ್ರ ಹಣ ಬಿಡುಗಡೆ ಮಾಡಬೇಕು. 15ದಿನದ ಸಮಯಾವಕಾಶ ನೀಡುತ್ತಿದ್ದು,ಒಂದು ವೇಳೆ ಮಾತು ತಪ್ಪಿದರೆ ಸೇತುವೆ ಮೇಲೆ ಅನಿರ್ದಿಷ್ಠಾವಧಿ ಧರಣಿ ಸೇರಿ ಉಗ್ರ ಹೋರಾಟ ಮಾಡುವುದು ಅನಿವಾರ್ಯ ಎಂದು ನರಿಬೋಳ ಎಚ್ಚರಿಸಿದರು.ಈ ಸಂದರ್ಭದಲ್ಲಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರವಣ ಕುಮಾರ ನಾಯಕ ರೈತರು ಅಧಿಕಾರಿಗಳು ಇನ್ನಿತರರಿದ್ದರು






























