ಬಿಕ್ಲು ಶಿವ ಕೊಲೆ; ಶಾಸಕ ಭೈರತಿ ಬಸವರಾಜ್ ಬಂಧನ

ಬೆಂಗಳೂರು, ಫೆ.12- ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಹಾಗೂ ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.


ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಂದು ಸಂಜೆ ಶಾಸಕ ಭೈರತಿ ಬಸವರಾಜ್ ಅವರ ಬಂಧಿಸಿ ಕಚೇರಿಗೆ ಕರೆತಂದಿರುವ ಸಿಐಡಿ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.


ಪ್ರಕರಣದ ತನಿಖೆಯ ವೇಳೆ ಆರೋಪಿ ಜಗ್ಗ ಯಾರೆಂಬುದೇ ಗೊತ್ತಿಲ್ಲವೆಂದು ಭೈರತಿ ಬಸವರಾಜ್​ ಹೇಳಿದ ಸುಳ್ಳುಗಳೇ ಅವರನ್ನು ಇಂದು ಜೈಲಿನ ಬಾಗಿಲಿಗೆ ತಳ್ಳಿವೆ.
ಪ್ರಕರಣಕ್ಕೆ ಸಂಬಂಧ ಭೈರತಿ ಬಸವರಾಜ್ ಈಗಾಗಲೇ ಕೆಲ ದಿನಗಳ ಹಿಂದೆಯೇ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿತ್ತು. ಇಂಡಿಗೋ – 6E683 ವಿಮಾನದಲ್ಲಿ ಅಹಮದಾಬಾದ್​​ನಿಂದ ಬೆಂಗಳೂರಿಗೆ ಆಗಮಿಸಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಐಡಿ ತಂಡ ಅವರನ್ನು ಬಂಧಿಸಿದೆ.


ಬಿಕ್ಲು ಶಿವ ಅಲಿಯಾಸ್‌ ಶಿವಕುಮಾರ್‌ ಕೊಲೆ ಪ್ರಕರಣದ ಸಂಬಂಧ ಶಾಸಕ ಭೈರತಿ ಬಸವರಾಜ್​ ಅವರಿಗೆ ಜಾಮೀನು ನೀಡಲು ನಿರಾಕರಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಬೆಳಿಗ್ಗೆ ಎತ್ತಿಹಿಡಿದಿತ್ತು


ಶಿವಕುಮಾರ್ ಕೊಲೆ ಪ್ರಕರಣದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿದ್ದ ಐದನೇ ಆರೋಪಿ ಭೈರತಿ ಬಸವರಾಜು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತ್ತು.


ಹೈಕೋರ್ಟ್ ಆದೇಶ:
ಇದಕ್ಕೂ ಮುನ್ನ ಬೈರತಿ ಬಸವರಾಜ್ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದ ಹೈಕೋರ್ಟ್, ತನಿಖಾ ದಾಖಲೆಗಳು, ಫೋಟೋ ಮತ್ತು ಸಿಡಿಆರ್‌ಗಳನ್ನು ಪರಿಶೀಲಿಸಿದಾಗ ಅರ್ಜಿದಾರರು ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಚ್ಚಳವಾಗಿ ತಿಳಿದುಬರುತ್ತದೆ. ಸಿಡಿಆರ್‌, ತನಿಖಾ ವರದಿ ಮತ್ತು ಇತರೆ ಆರೋಪಿಗಳೊಂದಿಗೆ ಅರ್ಜಿದಾರರು ಇರುವ ಫೋಟೋಗಳನ್ನು ಆರೋಪಿಯ ಎದುರಿಗಿಟ್ಟು ತನಿಖೆ ನಡೆಸಬೇಕಾದ ಅವಶ್ಯಕತೆಯಿದೆ.


ತನಿಖಾ ದಾಖಲೆಗಳ ಕುರಿತು ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕಾದ ಮತ್ತು ಆ ಕುರಿತು ಅರ್ಜಿದಾರರು ವಿವರಣೆ ನೀಡಬೇಕಾದ ಅವಶ್ಯಕತೆಯಿದೆ. ವಿಚಾರಣೆ ಅಥವಾ ಹೇಗೆ ವಿಚಾರಣೆ ಮಾಡಬೇಕೆಂದು ಅರ್ಜಿದಾರರು ನಿರ್ದೇಶಿಸಲು ಸಾಧ್ಯವಿಲ್ಲ. ಹಾಗಾಗಿ, ಬೈರತಿ ಬಸರಾಜ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂಬ ತನಿಖಾಧಿಕಾರಿಗಳ ಮನವಿ ತಳ್ಳಿಹಾಕಲಾಗದು ಎಂದು ಹೇಳಿತ್ತು.


ತನಿಖಾ ಪ್ರಾಧಿಕಾರಕ್ಕೆ ಬಿಡಿ:
ನಿರೀಕ್ಷಣಾ ಜಾಮೀನಿನ ಮೇಲೆ ತುಂಬಾ ಪ್ರಭಾವಿಯಾಗಿರುವ ಅರ್ಜಿದಾರ ಆರೋಪಿಯ ವಿಚಾರಣೆ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಯಾವ ವಿಧಾನದಲ್ಲಿ ತನಿಖೆ ನಡೆಸಬೇಕು ಎಂಬ ನಿರ್ಧಾರವನ್ನು ತನಿಖಾ ಪ್ರಾಧಿಕಾರಕ್ಕೆ ಬಿಡಬೇಕು. ಅದರ ಬಗ್ಗೆ ನ್ಯಾಯಾಲಯವು ತೀರ್ಪಿನಲ್ಲಿ ಹೇಳಲು ಸಾಧ್ಯವಿಲ್ಲ. ಅಸಾಧಾರಣ ಪರಿಹಾರ ಎಂದು ಪರಿಗಣಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು. ಆದರೆ, ಬೈರತಿ ಬಸವರಾಜ್‌ ಅವರ ವಿಧಾಸಭಾ ಕ್ಷೇತ್ರದಲ್ಲಿಯೇ ಮೃತ ಶಿವಕುಮಾರ್‌ ಹಾಗೂ ಆತನ ತಾಯಿ ವಾಸವಿದ್ದಾರೆ. ಬಸವರಾಜ್‌ ರಾಜಕೀಯ ಅಧಿಕಾರವನ್ನು ಹೊಂದಿದ್ದಾರೆ. ಇದು ನ್ಯಾಯಯುತ ತನಿಖೆಗೆ ಅಡ್ಡಿಯಾಗುವ ಸಾಧ್ಯತೆಯಿದೆ. ಇದೂ ಸಹ ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲು ಒಂದು ಕಾರಣವಾಗಿದೆ ಎಂದು ಪೀಠ ತಿಳಿಸಿತ್ತು.


ಶಿವು ಹಿಂದೆಯೇ ದೂರು:

ಭೂ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಮೃತರ ನಡುವೆ ಈ ಹಿಂದೆಯೇ ದ್ವೇಷವಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ಅದಕ್ಕೆ ಅರ್ಜಿದಾರರು, ಪ್ರಕರಣದ ಮೊದಲನೆ ಆರೋಪಿ ಜಗದೀಶ್‌ ಜವಾಬ್ದಾರರಾಗುತ್ತಾರೆ ಎಂದು ಲಿಖಿತವಾಗಿ ಮೃತ ಶಿವು ಹಿಂದೆಯೇ ದೂರು ನೀಡಿದ್ದರು. ಇದರಿಂದ ಶಿವುಗೆ ಜೀವ ಭಯವಿತ್ತು ಎಂಬುದು ದೃಢಪಡುತ್ತದೆ. ಮೃತ ವ್ಯಕ್ತಿ ಬಿಕ್ಲು ಶಿವ ಹಾಗೂ ಅವರ ತಾಯಿ ಅರ್ಜಿದಾರರು ಶಾಸಕರಾಗಿರುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಸ ಮಾಡುತ್ತಿರುವ ಕಾರಣ ನಿರೀಕ್ಷಣಾ ಜಾಮೀನು ನೀಡಿದರೆ, ಅದು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ಹೈಕೋರ್ಟ್​​ ಹೇಳಿತ್ತು.


ಪ್ರಕರಣದ ಹಿನ್ನೆಲೆ:
ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು ರಾತ್ರಿ ರೌಡಿಶೀಟರ್‌ ಬಿಕ್ಲು ಶಿವ ಅಲಿಯಾಸ್‌ ಶಿವಪ್ರಕಾಶ್‌ ಕೊಲೆಯಾಗಿತ್ತು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿದೆ ಎಂದು ಆರೋಪಿಸಿ ಶಿವಪ್ರಕಾಶ್‌ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಜಗದೀಶ್‌, ಕಿರಣ್‌, ವಿಮಲ್‌, ಅನಿಲ್‌ ಮತ್ತು ಬೈರತಿ ಬಸವರಾಜ್ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಬಂಧನ ಭೀತಿ ಎದುರಿಸುತ್ತಿದ್ದ ಶಾಸಕ ಬಸವರಾಜ್​ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಪೀಠ, ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತ್ತು. ಬಳಿಕ ವಿಚಾರಣಾ ನ್ಯಾಯಾಲಯ ಕೂಡ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿತ್ತು.