ಸಿಐಡಿ ಕಸ್ಟಡಿಗೆ ಭೈರತಿ ಬಸವರಾಜ್

ಬೆಂಗಳೂರು,ಫೆ.೧೫-ರೌಡಿ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಅನಾರೋಗ್ಯಕ್ಕೆ ಒಳಗಾದ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು ಇಂದು ನ್ಯಾಯಾಲಯ ೭ ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿದೆ.


ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡ ಕೂಡಲೇ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಬಸವರಾಜ್ ಅವರನ್ನು ಐಸಿಯು ವಾರ್ಡ್‌ನ ಎ ಬ್ಲಾಕ್‌ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಿ ಬಳಿಕ ಆಂಜಿಯೋಗ್ರಾಂ ನಡೆಸಿದ ಬೆನ್ನಲ್ಲೇ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.
ನ್ಯಾಯಾಧೀಶರ ಬಳಿ ಬಸವರಾಜ್ ಅವರನ್ನು ೧೪ ದಿನಗಳ ಕಾಲ ಕಸ್ಟಡಿಗೆ ಕೇಳಿದ್ದು ಆದರೆ ೭ ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ. ಕಸ್ಟಡಿಗೆ ನೀಡಿದ ಬಸವರಾಜ್ ಅವರನ್ನು
ಸಿಐಡಿ ಕಚೇರಿಗೆ ಕರೆತಂದು ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ. ರೌಡಿ ಬಿಕ್ಲು ಶಿವನ ಹತ್ಯೆ ಪ್ರಕರಣದ ೫ನೇ ಆರೋಪಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸತೊಡಗಿದ್ದಾರೆ.


ಈ ಹಿಂದೆ ಭಾರತೀನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಬೈರತಿ ಬಸವರಾಜ್ ಅವರು ಸತ್ಯಾಂಶಗಳನ್ನು ಮರೆಮಾಚಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ಕಸ್ಟಡಿ ಅಗತ್ಯವಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.


ಪ್ರಕರಣದ ವಿವರ:
ಕಳೆದ ಜುಲೈ ೧೫ರಂದು ಕಾರಿನಲ್ಲಿ ಬಂದಿದ್ದ ೮-೯ ಜನ ದುಷ್ಕರ್ಮಿಗಳು ಭಾರತೀನಗರದಲ್ಲಿರುವ ಮನೆಯ ಮುಂದೆಯೇ ರೌಡಿಶೀಟರ್ ಶಿವಪ್ರಕಾಶ್‌ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಕಾಲ್ಕಿತ್ತಿದ್ದರು. ಕೃತ್ಯದ ಬಳಿಕ ಶಿವನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಶಾಸಕ ಬೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಫೆ.೧೨ರಂದು ಅಂದರೆ, ಘಟನೆ ನಡೆದ ಏಳು ತಿಂಗಳ ಬಳಿಕ ಸಿಐಡಿ ಅಧಿಕಾರಿಗಳು ಬೈರತಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.