
ಕಲಬುರಗಿ,ಮಾ.30: ಐತಿಹಾಸಿಕ ಭೈರಾಮಡಗಿ ಗ್ರಾಮದ ಶ್ರೀ ಕಾಲ ಭೈರವ ದೇವಸ್ಥಾನಕ್ಕೆ ಯಾತ್ರಿಕ ನಿವಾಸ ಹಾಗೂ ಗ್ರಾಮದಿಂದ ದೇವಾಲಯವರೆಗೆ ರಸ್ತೆ ಅಭಿವೃದ್ಧಿಪಡಿಸುವುದಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ ಪಾಟೀಲ್ ಭರವಸೆ ನೀಡಿದರು.
ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಕಾಲಭೈರವ ದೇವಸ್ಥಾನದ ರಥೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಲ ಭೈರವ ಈ ದೇವಸ್ಥಾನಕ್ಕೆ ಈಗ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಯಾತ್ರಿಕ ನಿವಾಸ ಹಾಗೂ ದೇವಸ್ಥಾನದ ರಸ್ತೆ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇರೆಗೆ ಕಾರ್ಯರೂಪಕ್ಕೆ ತರಲಾಗುವುದು ಎಂದು ಪ್ರಕಟಿಸಿದರು.
ಈ ಹಿಂದೆ ಪ್ರವಾಸೋದ್ಯಮ ಇಲಾಖೆಯಡಿ 30 ಲಕ್ಷ ರೂ ವೆಚ್ಚದಲ್ಲಿ ಯಾತ್ರಿಕ ನಿವಾಸ ಭೈರಲಿಂಗೇಶ್ವರ ದೇವಸ್ಥಾನಕ್ಕೆ ಮಂಜೂರಾಗಿತ್ತು. ಜತೆಗೆ ಸ್ಥಳಾವಕಾಶ ಬಗ್ಗೆ ಸಮೀಕ್ಷೆ ಸಹ ಮಾಡಲಾಗಿತ್ತು. ಆದರೆ ಅನುದಾನ ಕೊರೆತೆಯೋ ಇಲ್ಲವೇ ಇನ್ನಾವುದು ತಾಂತ್ರಿಕ ಕಾರಣದಿಂದ ನಿಂತಿದೆ ಎಂಬುದನ್ನು ಪರಿಶೀಲಿಸಲಾಗುವುದು.ಭೈರಾಮಡಗಿ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯಗಳು ಹಾಗೂ ಇತರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಅಭಿವೃದ್ಧಿ ಬದ್ಧತೆ ಹೊಂದಲಾಗಿದೆ ಎಂದು ಅರುಣಕುಮಾರ ಪಾಟೀಲ್ ಹೇಳಿದರು. ಕಾಲ ಭೈರವ ದೇವಸ್ಥಾನ ಭಕ್ತ ಮಂಡಳಿ ಪರವಾಗಿ ಸನ್ಮಾನಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಭೈರಾಮಡಗಿ ಮಹಾಂತೇಶ್ವರ ವಿರಕ್ತ ಮಠದ ಷಡಕ್ಷರಿ ದೇವರು, ಸ್ಟೇಷನ್ ಗಾಣಗಾಪುರದ ನಾಗು ಮುತ್ಯಾ ಸಾನ್ನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ವಿವಿಧ ಸರ್ಕಾರಿ ಹುದ್ದೆಗಳಲ್ಲಿರುವ ಗ್ರಾಮದ ನೌಕರರನ್ನು ಸನ್ಮಾನಿಸಲಾಯಿತು. ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರಾಗಿ ಚುನಾಯಿತರಾದ ಲಕ್ಷ್ಮೀಕಾಂತ ಡಿ. ಪಾಟೀಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಪತ್ರಕರ್ತ ಹಣಮಂತರಾವ ಡಿ. ಹಿರೇಗೌಡ, ಪ್ರಮುಖರಾದ ಶಿವಾನಂದ ಯಶ್ವಂತರಾವ ಬಿರಾದಾರ, ಈರಣ್ಣ ನಂದರಗಿ, ಬಸಣ್ಣ ಜಿ. ಹಿರೇಗೌಡ, ಸಂಜುಗೌಡ ಬಿದಾದಾರ, ಜೆ.ಡಿ. ಪಾಟೀಲ್, ಮಲ್ಲಿನಾಥ ಜವಳಿ, ವಿಶ್ವನಾಥ ಪಾಟೀಲ್, ಸಿದ್ದಲಿಂಗ ಗುರನಂಜಿ, ಶಿವುಗೌಡ ಬಿ. ಪೆÇಲೀಸ್ ಪಾಟೀಲ್ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ನಿವೃತ್ತ ಶಿಕ್ಷಕ ಶಾಮರಾವ ಪೆÇೀದ್ದಾರ ನಿರೂಪಿಸಿ ವಂದಿಸಿದರು. ಇದಕ್ಕೂ ಮುಂಚೆ ನಡೆದ ಕಾಲ ಭೈರವ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.




























