
ಕಲಬುರಗಿ,ಏ.2-ತಾಲ್ಲೂಕಿನ ಹಡಗಿಲ್ ಹಾರುತಿ ಗ್ರಾಮದ ಸರ್ವೆ ನಂ.142/2ರಲ್ಲಿ ವಿದ್ಯುತ್ ಕಂಬದ ತಂತಿಗಳು ಕೆಳಗಡೆ ಬಾಗಿದ್ದು, ಅವುಗಳನ್ನು ಸರಿಪಡಿಸಬೇಕು ಎಂದು ರೈತ ಶಿವಕುಮಾರ ಕಟ್ಟಿ ಮನವಿ ಮಾಡಿದ್ದಾರೆ.
ಈ ಸಂಬಂಧ ಅವರು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದು, ಹಡಗಿಲ್ ಹಾರುತಿ ಗ್ರಾಮದ ಜಮೀನು ಸರ್ವೆ ನಂ.132/2ರಲ್ಲಿ ಕಬ್ಬು ಬೆಳೆದು ಉಪ ಜೀವನ ನಡೆಸುತ್ತಿದ್ದು, ಜಮೀನಿನಲ್ಲಿರುವ ವಿದ್ಯುತ್ ಕಂಬಗಳ ತಂತಿಗಳು ಕೆಳಗಡೆ ಬಾಗಿವೆ. ಬೇಸಿಗೆ ಮತ್ತು ಮಳೆಗಾಲದ ಸಮಯದಲ್ಲಿ ಬಿರುಗಾಳಿಯಿಂದ ವಿದ್ಯುತ್ ತಂತಿಗಳು ನೆಲಕ್ಕೆ ತಾಗುವ ಸಂಭವವಿದೆ. ಈ ಸಮಯದಲ್ಲಿ ಜಾನುವಾರುಗಳು, ಮನುಷ್ಯರು ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಈ ಕಾರಣಕ್ಕಾಗಿ ಮುಂದೆ ಯಾವುದೇ ಅನಾಹುತವಾಗದಂತೆ ಬಾಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ವಿಷಯವನ್ನು ಈಗಾಗಲೇ ಸಂಬಂಧಪಟ್ಟ ಲೈನ್‍ಮ್ಯಾನ್ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.






















