ತಾರತಮ್ಯವಿಲ್ಲದೆ ಸಮಾನತೆ ಸಾರಿದ ಬಸವಣ್ಣ

ಕಲಬುರಗಿ:ಅ.25:ಬಸವಣ್ಣನವರು ಜಾತ್ಯಾತೀತತೆಯ ಪ್ರವರ್ತಕರಾಗಿದ್ದರು, ಏಕೆಂದರೆ ಅವರು ಜಾತಿ, ಧರ್ಮ, ಲಿಂಗ ಮತ್ತು ವರ್ಗಗಳ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಸಮಾನತೆಯನ್ನು ಸಾರಿದರು ಎಂದು ನಿವೃತ್ತ ಶಿಕ್ಷಕಿ ಶ್ರೀಮತಿ ಮಂಗಲಾ ಕಪರೆ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರಾವಣ ಮಾಸದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಕರ್ನಾಟಕದ ಸಾಂಸ್ಕøತಿಕ ನಾಯಕ ಬಸವಣ್ಣ ವಿಷಯದ ಶೀರ್ಷಿಕೆ ಅಡಿಯಲ್ಲಿ ಬಸವಣ್ಣ ಮತ್ತು ಜಾತ್ಯಾತೀತತೆ ಎಂಬ ವಿಷಯ ಕುರಿತು ಮಾತನಾಡಿದರು.
ಬಸವಣ್ಣನವರ ಸಾಮಾಜಿಕ ಕ್ರಾಂತಿ, ಮಾನವೀಯ ಮೌಲ್ಯಗಳಾದ ಕಾಯಕ ಮತ್ತು ದಾಸೋಹ ತತ್ವ, ಮತ್ತು ಅನುಭವ ಮಂಟಪದ ಸ್ಥಾಪನೆಯ ಮೂಲಕ ಪ್ರತಿಯೊಬ್ಬರೂ ಸಮಾನರಾಗಿದ್ದಾರೆ ಎಂಬ ವಿಶ್ವಾಸವನ್ನು ಮೂಡಿಸಿದರು, ಇದು ಜಾತ್ಯಾತೀತ ಸಮಾಜದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು.
ಬಸವಣ್ಣನವರು ‘ಇವನಾರವ ಇವನಾರವ’ ಎಂದು ಮಾಡುವ ಜಾತಿ ತಾರತಮ್ಯವನ್ನು ಸಂಪೂರ್ಣವಾಗಿ ವಿರೋಧಿಸಿದರು. ಎಲ್ಲ ಮಾನವರು ಸಮಾನರು ಎಂಬ ನಂಬಿಕೆ ಅವರಲ್ಲಿತ್ತು.
ಜಾತಿ ಮತ್ತು ಧರ್ಮದ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ಬಸವಣ್ಣನವರು ಹೇಳಿದ್ದರು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಿಸಬಹುದೆಂದು ಅವರು ಪ್ರತಿಪಾದಿಸಿದರು.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವು ವೈಚಾರಿಕ ಚಿಂತನೆಗಳಿಗೆ ವೇದಿಕೆಯಾಯಿತು. ಇಲ್ಲಿ ಎಲ್ಲ ವರ್ಗದ, ಲಿಂಗದ ಜನರು ತಮ್ಮ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದರು. ಅವರ ತತ್ವಗಳು ಸಾಮಾಜಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತವೆ. ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಸುಖಿರಾಜ್ಯದ ಕನಸನ್ನು ನನಸು ಮಾಡಬಹುದು ಎಂಬುದು ಅವರ ಬೋಧನೆಯಾಗಿತ್ತು. ಬಸವಣ್ಣನವರು ಸರ್ವ ಧರ್ಮೀಯರಾಗಿ ಬದುಕಿನ ಅರ್ಥವನ್ನು ಕಲಿಸುವ ನೇತಾರರಾಗಿದ್ದರು. ಅವರು ಆಚಾರ, ವಿಚಾರ, ಜನರ ವಿಶ್ವಾಸ, ಪ್ರೀತಿ ನೋಡಿದರೆ ಹೊರತು ಯಾವುದೇ ಜಾತಿಯನ್ನಲ್ಲ. ಸರ್ವರಿಗೂ ಸಬಾಳು, ಸಹಬಾಳು ಎಂಬ ಆಶಯವನ್ನು ಹೊಂದಿದ್ದ ಅವರು, ದಲಿತರಿಗೆ ದನಿಯಾಗಿ, ಶೋಷಿತರಿಗೆ ಆಶ್ರಯದಾತರಾಗಿದ್ದರು ಎಂದು ಹೇಳಿದರು.
ನಂತರ ಸಂಚಾಲಕ ಡಾ.ಶಿವರಾಜ ಶಾಸ್ತ್ರಿ ಹೇರೂರ್ ಮಾತನಾಡಿ, ಜಾತ್ಯಾತೀತೆ ಎಂದರೆ ಎಲ್ಲರನ್ನೂ ಒಂದೆ ಎಂದು ಕಾಣುವುದು. ಬಸವಣ್ಣನವರು ಎಲ್ಲರೂ ಸಮಾನವರು ಎಂದು ಕಂಡರು. ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ್ದರು. ಶಿವನ ಅಂಶಿಕರು ನಾವು ಎಲ್ಲರೂ ಒಂದೆ. ಅವರ ವಚನಗಳು ಮತ್ತು ಬೋಧನೆಗಳು ಜಾತಿ, ಧರ್ಮ, ಲಿಂಗ ಮತ್ತು ವರ್ಣಭೇದಗಳನ್ನು ವಿರೋಧಿಸಿ ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಅವರು ಕಾಯಕ ಮತ್ತು ದಾಸೋಹ ತತ್ವಗಳ ಮೂಲಕ ಶೋಷಣೆಯಿಲ್ಲದ ಸಮಾನತೆಯ ಸಮಾಜವನ್ನು ನಿರ್ಮಿಸಲು ಪ್ರಯತ್ನಿಸಿದರು ಎಂದರು.