
ಕಲಬುರಗಿ,ಆ.25-ಬ್ಯಾಂಕ್ ಮ್ಯಾನೇಜರ್ ಒಬ್ಬರ ಮೇಲೆ ಹಲ್ಲೆ ನಡೆಸಿ ಹಣ, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ತಾಲ್ಲೂಕಿನ ಆಸಂಗಿ ಗ್ರಾಮದಲ್ಲಿರುವ ಬ್ಯಾಂಕ್ ಆಫ್ ಬರೋಡಾದಲ್ಲಿ ಜಾಯಿಂಟ್ ಮ್ಯಾನೇಜರ್ ಆಗಿರುವ ಮಲ್ಲಿಕಾರ್ಜುನ ಕಡೂನ್ ಎಂಬುವವರ ಮೇಲೆ ಹಲ್ಲೆ ನಡೆಸಿ 80 ಸಾವಿರ ರೂ.ಮೌಲ್ಯದ ಬಂಗಾರದ ಚೈನ್, 2,500 ರೂ.ನಗದು ದೋಚಲಾಗಿದೆ.
ಕಡೂನ್ ಅವರು ಬನಹಟ್ಟಿಯಿಂದ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕಲಬುರಗಿಗೆ ಆಗಮಿಸಿ ನಗರದ ಜಗತ್‍ನ ಭೀಮನಗರಕ್ಕೆ ಹೋಗಲು ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಆಟೋಗಾಗಿ ಕಾಯುತ್ತ ನಿಂತಿದ್ದಾರೆ. ಈ ವೇಳೆ ಆಟೋ ಚಾಲಕನೊಬ್ಬ ಇವರ ಬಳಿಗೆ ಬಂದು ಎಲ್ಲಿಗೆ ಹೋಗಬೇಕು ಎಂದು ಕೇಳಿ ಜಗತ್ ಸರ್ಕಲ್‍ಗೆ 20 ರೂಪಾಯಿ ಆಗುತ್ತದೆ ಎಂದಿದ್ದಾನೆ. ಇವರು ಆಟೋದಲ್ಲಿ ಕೂರುವ ಮೊದಲೇ ಒಬ್ಬ ಅಪರಿಚಿತ ವ್ಯಕ್ತಿ ಆಟೋದಲ್ಲಿ ಕುಳಿತಿದ್ದ. ಆಟೋ ಎಸ್.ಬಿ.ಪೆಟ್ರೋಲ್ ಪಂಪ್ ಹತ್ತಿರ ಹೋಗುತ್ತಿದ್ದಂತೆಯೇ ಮತ್ತಿಬ್ಬರು ಆಟೋ ನಿಲ್ಲಿಸಿ ಅದರಲ್ಲಿ ಕುಳಿತಿದ್ದಾರೆ. ಆಗ ಆಟೋ ಚಾಲಕ ಜಗತ್ ಸರ್ಕಲ್‍ಗೆ ಹೋಗುವ ಬದಲು ಸರ್ಕಾರಿ ಆಸ್ಪತ್ರೆ ಕಡೆಗೆ ಆಟೋ ತಿರುಗಿಸಿದ್ದಾನೆ. ಆಗ ಕಡೂನ್ ಅವರು ನಾನು ಜಗತ್‍ಗೆ ಹೋಗಬೇಕು ಎಂದಿದ್ದಾರೆ. ಆಗ ಇವರ ಎಡಕ್ಕೆ ಮತ್ತು ಬಲಕ್ಕೆ ಮತ್ತು ಆಟೋಚಾಲಕನ ಪಕ್ಕದಲ್ಲಿ ಕುಳಿತ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಬಂಗಾರ ಮತ್ತು ಹಣ ದೋಚಿದ್ದಾರೆ. ಆ ನಂತರ ಇವರನ್ನು ಆಟೋದಿಂದ ಕೆಳಗಡೆ ನೂಕಿ ಆಟೋ ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.